6

ಶ್ರೀಗಳ ಸದಾಶಯಕ್ಕೆ ಭಂಡರಿಂದ ಭಂಗ: ಮದುವೆಯ ಕನಸು ಬಿತ್ತಿ, ಕಾಸು ಪೀಕುವ ಖದೀಮರು

ಕಳಚೆಯ ಪುರೋಹಿತರೊಬ್ಬರಿಗೆ ಉತ್ತರ ಭಾರತದ ಹೆಣ್ಣಿನೊಂದಿಗೆ ವಿವಾಹ ಮಾಡಿಸುವುದಾಗಿ ಹೇಳಿ, ಹಣ ಪಡೆದು, ವಂಚಿಸಿದ ಪ್ರಕರಣ ಠಾಣೆಯ ಮೆಟ್ಟಿಲೇರಿದೆ. ಉತ್ತರ ಭಾರತದ ವೈವಾಹಿಕ ಸಂಬಂಧ ‘ಉದ್ಯಮವಾಗಿ’ ವ್ಯಾಪಿಸಿರುವುದು ಈವರೆಗೆ ಅಂತೆ-ಕಂತೆಗಳ ಚರ್ಚೆಗೆ ಸೀಮಿತವಾಗಿತ್ತು.‌ ಈ ಪ್ರಕರಣದ ಮೂಲಕ ಸತ್ಯ ಅಧಿಕೃತವಾಗಿ ಬಹಿರಂಗಗೊಂಡಿದೆ.

ಹವ್ಯಕ ಯುವಕರಿಗೆ, ಅದರಲ್ಲೂ ಪ್ರಮುಖವಾಗಿ ಕೃಷಿಕರ ವಿವಾಹಕ್ಕೆ ಕನ್ಯೆಯರ ಬರ ನೀಗಿಸುವ ನಿಟ್ಟಿನಲ್ಲಿ ಉತ್ತರ ಬ್ರಾಹ್ಮಣರೊಂದಿಗೆ ವೈವಾಹಿಕ ಸಂಬಂಧ ಏರ್ಪಡಿಸುವ ಕನಸು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳದ್ದು. ಸ್ವತಃ ಶ್ರೀಗಳೇ ಉತ್ತರ ಭಾರತಕ್ಕೆ ಭೇಟಿ ನೀಡಿ, ಅಗತ್ಯವಾದ ಮಾತುಕತೆಯ ಮೂಲಕ ವೇದಿಕೆ ಸಿದ್ಧಗೊಳಿಸಿದ್ದರು. ಅದರಂತೆ ಶ್ರೀಗಳ ಮಾರ್ಗದರ್ಶನದಲ್ಲಿ ‘ಸಪ್ತಪದಿ’ ಎಂಬ ಸಂಸ್ಥೆ ಜನ್ಮತಾಳಿ, ಅದರ ಮೂಲಕ ಉತ್ತರ-ದಕ್ಷಿಣದ ವಿವಾಹಗಳು ನಡೆಯತೊಡಗಿದ್ದವು.

ಯಲ್ಲಾಪುರ, ಶಿರಸಿ, ಅಂಕೋಲಾ ತಾಲೂಕುಗಳಲ್ಲಿ ಅನೇಕರು ಉತ್ತರದ ಕನ್ಯೆಯರನ್ನು ವರಿಸಿದ್ದಾರೆ.
ಆರಂಭದಿಂದ ಕೆಲ ವರ್ಷಗಳವರೆಗೆ ಸಂಸ್ಥೆಯ ಮೂಲಕವೇ ವಿವಾಹಗಳು ನಡೆಯುತ್ತಿದ್ದವು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು.

ನಂತರ ಸಂಸ್ಥೆಗೆ ಸಂಬಂಧವಿಲ್ಲದ ಕೆಲವು ವೈವಾಹಿಕ ಏಜೆಂಟ್ ಗಳು ತಲೆಯೆತ್ತಿ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ. ವಿವಾಹದ ಕನಸು ಹೊತ್ರ ಯುವಕರ, ಅವರ ಕುಟುಂಬದವರ ಭಾವನೆಯನ್ನೇ ಬಳಸಿಕೊಂಡು, ಲಕ್ಷ ಲಕ್ಷ ಹಣ ಪೀಕುವ ದಂಧೆ ನಡೆಸುತ್ತಿದ್ದಾರೆ. ಇದಕ್ಕೆ ಉತ್ತರ ಭಾರತದ ಕೆಲವರನ್ನೂ ಜೊತೆಯಾಗಿಸಿಕೊಂಡಿದ್ದಾರೆ.

ಈ ಜಾಲದಿಂದ ನೊಂದವರ ಒಂದೊಂದು ಕಥೆಯೂ ವಿಚಿತ್ರ ಹಾಗೂ ಆಶ್ಚರ್ಯಕರವಾಗಿದೆ. ಹುಡುಗಿಯ ಫೊಟೊ ಮೊದಲೇ ತೋರಿಸಿ, ನಂತರ ಉತ್ತರ ಭಾರತಕ್ಕೆ ಕರೆದೊಯ್ಯಲಾಗುತ್ತದೆ. ಹೋಗಲು ವಿಮಾನವೇ ಆಗಬೇಕು. ಅಲ್ಲಿ ಹುಡುಗಿ ನೋಡಿ, ಒಪ್ಪಿಗೆಯಾದ ಮೇಲೆ ಒಂದಷ್ಟು ಲಕ್ಷ ಬಿಚ್ಚಿದರೆ ಮುಂದಿನ ಕಾರ್ಯ, ಇಲ್ಲವಾದರೆ ಮದುವೆ ಇಲ್ಲ. ಏನೋ ಒಂದು ಕುಂಟು ನೆಪ ಹೇಳಿ ಸಾಗ ಹಾಕುತ್ತಾರೆ.

ಮೊದಲೇ ಮದುವೆಯಾದ ಆಂಟಿಯರನ್ನು ‘ಹುಡುಗಿ’ ಎಂದು ನಂಬಿಸಿ, ಕರೆತಂದು ವಿವಾಹ ಮಾಡುವ ಯತ್ನಗಳನ್ನೂ ನಡೆಸಿದ್ದರಂತೆ. ಕೆಲವೊಮ್ಮೆ ಯುವಕರನ್ನು, ಅವರ ಕುಟುಂಬದವರನ್ನು ಹೆಣ್ಣು ತೋರಿಸುವುದಾಗಿ ಉತ್ತರ ಪ್ರದೇಶಕ್ಕೆ ಕರೆದೊಯ್ದು, ಹೆಣ್ಣನ್ನು ತೋರಿಸದೇ ಅಲ್ಲಿಯೇ ಅವರನ್ನು ಬಿಟ್ಟು ಮರಳಿ ಬಂದವರೂ ಇದ್ದಾರಂತೆ. ಮದುವೆಯಾಗಿ ಕೆಲ ದಿನ ಸಂಸಾರ ಮಾಡಿ, ಹೇಳದೇ ಕೇಳದೇ ನಾಪತ್ತೆಯಾಗುವಂತೆ ಮಾಡುವ ಜಾಲವೂ ಇದೆಯಂತೆ.

ಗಂಡು-ಹೆಣ್ಣು ಒಪ್ಪಿದ ಮೇಲೂ ಕೇಳಿದಷ್ಟು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಸಂಬಂಧ ಮುರಿದು ಬಂದ ಹಲವು ಘಟನೆಗಳು ನಡೆದಿವೆ. ಮದುವೆಯಾಗುವ ಯುವಕರನ್ನು ಕರೆದೊಯ್ಯುವ ಏಜೆಂಟರೇ ಅಲ್ಲಿ ಹೋದ ನಂತರ ಭಂಗಿ, ಮದ್ಯದ ನಶೆಯಲ್ಲಿ ತೇಲುತ್ತ ಹೋದ ಕಾರ್ಯವನ್ನೇ ಮರೆತವರೂ ಇದ್ದಾರಂತೆ. ಹಣ ಕೇಳುವಾಗ ‘ಇದು ನನ್ನೊಬ್ಬನಿಗೆ ಅಲ್ಲ, ಅವರಿಗೆ ಕೊಡಬೇಕು, ಇವರಿಗೆ ಕೊಡಬೇಕು’ ಎಂದು ದೊಡ್ಡ ದೊಡ್ಡ ಜನರ ಹೆಸರು ಹೇಳುವವರೂ ಇದ್ದಾರೆ. ಮಾಹಿತಿ ಇಲ್ಲದವರ ಎದುರಲ್ಲಿ ತಾವು ಶ್ರೀಮಠದ ಪ್ರತಿನಿಧಿ ಎಂದು ಸುಳ್ಳು ಹೇಳಿಕೊಂಡೇ ವ್ಯವಹಾರ ಕುದುರಿಸುವವರೂ ಇದ್ದಾರೆ. ಹೀಗೆ ಒಂದಕ್ಕಿಂತ ಒಂದು ವಿಭಿನ್ನ, ವಿಚಿತ್ರ ಕಥೆಗಳು ಈಗ ಒಂದೊಂದಾಗಿ ಹೊರಬರುತ್ತಿವೆ.

ಈ ‘ವ್ಯವಸ್ಥಿತ ಜಾಲ’ದಿಂದ ಹಣ ಕಳೆದುಕೊಂಡ ಅನೇಕರು ಈಗ ತಮ್ಮ ಕಥೆಗಳನ್ನು ತೆರೆದಿಡುತ್ತಿದ್ದಾರೆ. ಮೊದಲೇ ನಡೆದ ಇಂತಹ ಇನ್ನೂ ಕೆಲವು ಪ್ರಕರಣಗಳು ಇನ್ನು ಮೇಲೆ ಠಾಣೆಯಲ್ಲಿ ದಾಖಲಾದರೆ ಅಚ್ಚರಿಯಿಲ್ಲ.‌

ಸ್ವರ್ಣವಲ್ಲಿಯ ಶ್ರೀಗಳು ಈ ವೈವಾಹಿಕ ಸಂಬಂಧದ ಕಾರ್ಯವನ್ನು ಆರಂಭಿಸಿದ್ದು ಹವ್ಯಕ ಸಮಾಜದ ಒಳಿತಿನ ಆಶಯದೊಂದಿಗೆ. ಆದರೆ ಅವರ ಆಶಯಕ್ಕೆ ಮಸಿ ಬಳಿಯುವ ಕಾರ್ಯವನ್ನು ಇಂತಹ ಅಯೋಗ್ಯರು ಮಾಡುತ್ತಿದ್ದಾರೆ. ವಂಚಕರ ಜಾಲವನ್ನು ಬೇಧಿಸಿ, ತಕ್ಕ ಶಿಕ್ಷೆ ವಿಧಿಸಬೇಕು. ಶ್ರೀ ಮಠದಿಂದ ಅಂಥವರಿಗೆ ಛೀಮಾರಿ ಹಾಕಬೇಕೆಂಬುದು ನೊಂದವರ ಆಗ್ರಹ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page