6
September 28, 2026

ಯಲ್ಲಾಪುರದ ಈದ್ ಮಿಲಾದ್ ಮೆರವಣಿಗೆ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವನಿಗೆ ಶಿಕ್ಷೆ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವ್ಯಕ್ತಿಗೆ ಯಲ್ಲಾಪುರದ ನ್ಯಾಯಾಲಯ ಒಂದು ವರ್ಷದವರೆಗೆ ಪರಿವೀಕ್ಷಣಾಧಿಕಾರಿಯ ಮೇಲ್ವಿಚಾರಣೆಯಲ್ಲಿರುವಂತೆ ಆದೇಶಿಸಿ, 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಕಳೆದ 2023 ರ ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಸಿಮ್ರಾನ್ ತಂಬೋಲಿ ಎಂಬಾತ ಹಿಡಿದು, ತಿರುಗಿಸುತ್ತಿದ್ದ ಬಾವುಟ ಈ ವಿವಾದಕ್ಕೆ ಕಾರಣವಾಗಿತ್ತು.‌ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟದಲ್ಲಿ ಅಶೋಕ ಚಕ್ರದ ಬದಲು ಹಳದಿ ಬಣ್ಣದ ಅರ್ಧ ಚಂದ್ರಾಕೃತಿ ಹಾಗೂ ಚಂದ್ರಾಕೃತಿಯ ಮೂರು ನಕ್ಷತ್ರಗಳನ್ನು ಆ ಬಾವುಟ ಹೊಂದಿತ್ತು.

ರಾಷ್ಟ್ರಧ್ವಜವನ್ನು ಹೋಲುವ ಬಾವುಟವನ್ನು ಈ ರೀತಿ ವಿರೂಪಗೊಳಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾರಣಕ್ಕಾಗಿ ಸಿಮ್ರಾನ್ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ಯಲ್ಲಾಪುರದ ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ.ಎಸ್ ಅವರು, ಆರೋಪಿಯನ್ನು ದೋಷಿ ಎಂದು ನಿರ್ಣಯಿಸಿ, ಆತ ಒಂದು ವರ್ಷದವರೆಗೆ ಪರಿವೀಕ್ಷಣಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಇರುವಂತೆ ಆದೇಶಿಸಿ, 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತನಿಖಾಧಿಕಾರಿಯಾಗಿದ್ದ ಅಂದಿನ ಸಿಪಿಐ ರಂಗನಾಥ ನೀಲಮ್ಮನವರ್ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಝೀನತ್ ಬಾನು ಇಬ್ರಾಹಿಂಸಾಬ ಶೇಖ್ ವಾದ ಮಂಡಿಸಿದ್ದರು.

You cannot copy content of this page