6
September 29, 2026

ಯಲ್ಲಾಪುರ: ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅವಿರೋಧವಾಗಿ ನಡೆಯಿತು.

ಸಂಘದ ಅಧ್ಯಕ್ಷರಾಗಿ ಕನ್ನಡ ಜನಾಂತರಂಗ ವರದಿಗಾರ ಸುಬ್ರಾಯ ಬಿದ್ರೆಮನೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿಜಯವಾಣಿ ಹಾಗೂ ತತ್ವನಿಷ್ಠ ವರದಿಗಾರ ಶ್ರೀಧರ ಅಣಲಗಾರ, ಪ್ರಧಾನ ಕಾರ್ಯದರ್ಶಿಯಾಗಿ ಕೊಂಕಣವಾಹಿನಿ ಹಾಗೂ ಶಿರಸಿ ಸಮಾಚಾರ ವರದಿಗಾರ ವಿಜಯಕುಮಾರ ನಾಯ್ಕ, ಖಜಾಂಚಿಯಾಗಿ ವಿಶ್ವವಾಣಿ ವರದಿಗಾರ ದತ್ತಾತ್ರೇಯ ಭಟ್ಟ ಕಣ್ಣಿಪಾಲ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಬೀರಣ್ಣ ನಾಯಕ ಮೊಗಟಾ ಕಾರ್ಯನಿರ್ವಹಿಸಿದರು. ಎಲ್ಲಾ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯನ್ನು ಅವರು ಘೋಷಿಸಿದರು.

ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಸಹಕರಿಸಿದ ಬೀರಣ್ಣ ಅವರನ್ನು ನಿಕಟಪೂರ್ವ ಅಧ್ಯಕ್ಷ ಕೆ.ಎಸ್ ಭಟ್ಟ ಆನಗೋಡ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್ ಭಟ್ಟ, ನೂತನ ಪದಾಧಿಕಾರಿಗಳು ಎಲ್ಲ ಸದಸ್ಯರ ಹಿತ ಕಾಯುವಂತೆ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ನೂತನ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಸಂಘವನ್ನು ಕ್ರಿಯಾಶೀಲತೆಯಿಂದ ಮುನ್ನಡೆಸುವುದಾಗಿ ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೋವಿ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಜಯರಾಜ ಗೋವಿ, ಸದಸ್ಯ ನರಸಿಂಹ ಸಾತೊಡ್ಡಿ ಉಪಸ್ಥಿತರಿದ್ದರು.

You cannot copy content of this page