ಜನವರಿ15 ರಂದು ಹವ್ಯಕ ಭವನ ಕಟ್ಟಡಕ್ಕೆ ಸ್ವರ್ಣವಲ್ಲೀ ಶ್ರೀಗಳಿಂದ ಭೂಮಿಪೂಜೆ
ಯಲ್ಲಾಪುರದ ಕಾಳಮ್ಮನಗರದಲ್ಲಿ ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಜ.15 ರಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹಾಗೂ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಭೂ ಶುದ್ಧಿ ಪ್ರಯುಕ್ತ ಭೂವರಾಹಾದಿ, ಗಣಪತಿ ಆರಾಧನೆ, ಶ್ರೀಸೂಕ್ತ, ಪುರುಷಸೂಕ್ತ, ರುದ್ರಹವನ, ಗಾಯತ್ರಿಹವನ, ದುರ್ಗಾಶಾಂತಿ, ನಾಗಮೂಲಮಂತ್ರ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾಮತಾರಕ ಜಪ, ಭಗವದ್ಗೀತಾ ಪಾರಾಯಣ ನಡೆಯಲಿದ್ದು, ಇದೇ ವೇಳೆ ಗೋಪೂಜೆಯನ್ನೂ ನೆರವೇರಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಟ್ಟಡ ಸಮಿತಿಯ ಅಧ್ಯಕ್ಷ ಮಾರುತಿ ಘಟ್ಟಿ ಮಾತನಾಡಿ, 8 ಕೋಟಿ ರೂ ವೆಚ್ಚದಲ್ಲಿ ಮೂರು ಅಂತಸ್ತಿನ ಹವ್ಯಕ ಭವನ ಕಟ್ಟಡ ನಿರ್ಮಾಣಗೊಳ್ಳಲಿದೆ. ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್, ಸಭಾಭವನ, ಅನಾರೋಗ್ಯ ಉಂಟಾದವರಿಗೆ ವಸತಿ ವ್ಯವಸ್ಥೆಯನ್ನು ಕಟ್ಟಡ ಒಳಗೊಂಡಿರುತ್ತದೆ ಎಂದು ವಿವರಿಸಿದರು.
ಇಂಜನಿಯರ್ ಗಳಾದ ಎಸ್.ವಿ ಭಟ್ಟ ಹಾಗೂ ಗಣೇಶ ಹೆಗಡೆ ಸವಣಗೇರಿ ಕಟ್ಟಡ ನಿರ್ಮಾಣದ ಕುರಿತಾಗಿ ಮಾಹಿತಿ ನೀಡಿದರು.
ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಅನಂತ ಗಾಂವ್ಕರ ಕಂಚಿಪಾಲ, ವಿಘ್ನೇಶ್ವರ ಗಾಂವ್ಕರ, ರಾಘವೇಂದ್ರ ಭಟ್ಟ ಸುಣಜೋಗ, ನಾಗೇಂದ್ರ ಭಟ್ಟ ಕವಾಳೆ, ವಿನಾಯಕ ಭಟ್ಟ ಕವಾಳೆ, ನಾರಾಯಣ ಭಟ್ಟ ಸುಣಜೋಗ, ವಿನಯ ಹೆಗಡೆ ಕೈಗಡಿ, ಡಿ.ವಿ.ಹೆಗಡೆ ಉಪಸ್ಥಿತರಿದ್ದರು.
