ಮಳೆ ಸುರಿದರೆ ಪಶ್ಚಿಮ ಘಟ್ಟದ ಅಡವಿಯ ಮಡಿಲಲ್ಲಿ ಉಗಮವಾಗುವ ನದಿ ಮೂಲಗಳ ಜಲನಾಡಿಗಳು ತುಂಬಿ ಹರಿಯುತ್ತವೆ. ಗಿರಿಯ ಕಣಿವೆ ಕಂದರಗಳಲ್ಲಿ ಜಲಪಾತಗಳಾಗಿ ಧುಮ್ಮಿಕ್ಕಿ ಹರಿಯುತ್ತಾ ವಯ್ಯಾರದ ಬಳುಕಿನೊಂದಿಗೆ ಅಬ್ಬರಿಸುತ್ತಾ ಘರ್ಜಿಸುತ್ತವೆ. ಹಸುರಿನ ಮಡಿಲಲ್ಲಿ – ಶ್ವೇತಧಾರೆಯ ಒಡಲಲ್ಲಿ – ಅಡವಿಯ ಎಡೆಯಲ್ಲಿ- ಗಿಡ ಮರಗಳ ನಡುವಲ್ಲಿ – ನೊರೆಗಳ ಕುಣಿಸುತ ಕುಣಿಕುಣಿದಾಡುವ ಹರಿಯುವ ನೀರಿನ ಸೌಂದರ್ಯವು ವರ್ಣನೆಗೆ ಸಿಗದಷ್ಟು ಚಂದ.
ಇAಥ ಜಲಪಾತಗಳು ದೂರಕ್ಕೆ ಎಷ್ಟು ಚಂದವೋ, ಹತ್ತಿರ ಹೋದಷ್ಟು (ಯಾವುದೇ ಅಧಿಕ ಪ್ರಸಂಗ ಮಾಡದೇ ಇದ್ದರೆ ಹತ್ತಿರವೂ ಚಂದವೇ) ಅಷ್ಟೇ ಅಪಾಯಕಾರಿ. ದೂರದಲ್ಲಿ ಕಾಣುವ ಸೌಂದರ್ಯವು ಜಲಧಾರೆಯ ವಿಹಂಗಮ ನೋಟ. ಹತ್ತಿರ ಹೋದಷ್ಟೂ ಅಪಾಯದ ಅಂಚು – ಇಂಚಿನ ದ್ವಾರಗಳು ತೆರೆದುಕೊಳ್ಳುತ್ತದೆ. ಅದೂ ಮಳೆಗಾಲದಲ್ಲಿ ಕಡಿದಾದ ಕಣಿವೆಯಲ್ಲಿ ಹರಿಯುವ ನೀರಿನಲ್ಲಿ ಕಾಣದೇ ಇರುವ ಪಾಚಿಯಲ್ಲಿ ಜಾರಿ ಬಿದ್ದು ಚಾರಣವನ್ನು `ಜಾರಣ’ ಮಾಡಿಬಿಡುತ್ತದೆ.
ಇತ್ತೀಚಿಗಿನ ವರುಷಗಳಲ್ಲಿ ಚಾರಣಿಗರ ಸಂಖ್ಯೆ ಹೆಚ್ಚಾಗುತ್ತಿದೆ. ನೈಜ ಪರಿಸರ ಪ್ರೇಮದಿಂದ, ಪಶ್ಚಿಮ ಘಟ್ಟದ ಮೇಲಿನ ಅಭಿಮಾನದಿಂದ ಬರುವ ಚಾರಣಿಗರಾದರೆ ಪರವಾಗಿಲ್ಲ. ಆದರೆ ಚಾರಣದ ಹೂರಣ ಪಶ್ಚಿಮ ಘಟ್ಟದ ನಿಗೂಢತೆ, ಜಲಪಾತದ ಅಪಾಯ, ವನ್ಯ ಜೀವಿಗಳ ಅರಿವು, ನಿಷಿದ್ದ ತಾಣಗಳ ಎಚ್ಚರಿಕೆ ಇಲ್ಲದೇ ಕೇವಲ ರಜಾ ಕಳೆಯಲು ಮಜಾ ಮಾಡಲು ಬರುವವರಿಂದ ಅಡವಿ ಮಡಿಲಿನಲ್ಲಿ ದುರಂತಗಳು ನಡೆಯುತ್ತಿದೆ.
ಕೆಲವು ಕಡೆ ಜಲಪಾತದ ಹತ್ತಿರ ಅಥವಾ ಅಡವಿಯ ಒಳ ಮಗ್ಗುಲಲ್ಲಿ ಅರಣ್ಯ ಇಲಾಖೆಯವರು `ಪ್ರವೇಶ ನಿಷೇದ’ ಎಂದು ಸೂಚಿಸಿದ್ದರೂ ಅದನ್ನು ಓದುವವರಿಲ್ಲ. ತಮ್ಮ ಅಹಂಕಾರವನ್ನು ಅಲಂಕಾರಗೊಳಿಸಲು ಹೋಗಿ ಜೀವವನ್ನೇ ಕಳೆದುಕೊಂಡವರ ಸಂಖ್ಯೆ ಲೆಕ್ಕವಿಲ್ಲ. ಪ್ರಕೃತಿಯ ಎದುರು ಮಾನವ ಏನೂ ಅಲ್ಲ. ಇದನ್ನು ಅರ್ಥ ಮಾಡದೇ ಕಾಡಿನಲ್ಲಿ, ಜಲ ತೊರೆಯಲ್ಲಿ ಸಾಹಸ ಶೂರರಾಗುವುದು, ಸೆಲ್ಫಿ ವೀರರಾಗುವುದು ಯಾವತ್ತಿಗೂ ಅಪಾಯ.
ಮಳೆಗಾಲದ ಅವಧಿಯಲ್ಲಿ ಜಲಪಾತಗಳು ತುಂಬಿ ಹರಿಯುತ್ತಿದ್ದೂ ಕೆಲವೊಮ್ಮೆ ಬೆಟ್ಟದ ಶಿರಭಾಗದಲ್ಲಿ ಒಮ್ಮೆಲೇ ಅಧಿಕ ಮಳೆಯಾದರೆ, ನೀರಿನ ಹರಿವು ಕೂಡಾ ಒಮ್ಮೆಲೇ ಜಾಸ್ತಿಯಾಗಿ ಜಲಪಾತಗಳು ಏಕಾಏಕಿ ತುಂಬಿ ಬಿಡುತ್ತವೆ. ಇಲ್ಲಿ ಮಳೆ ಬೀಳುವುದಕ್ಕೂ, ಜಲಪಾತ ಒಮ್ಮೆಲೇ ತುಂಬುವುದಕ್ಕೂ ಯಾವುದೇ ಲೆಕ್ಕಾಚಾರ ಹಾಕಿಕೊಳ್ಳಲು ನಮ್ಮಿಂದ ಅಸಾಧ್ಯ. ನದಿ ಮೂಲದಲ್ಲಿ ಮಳೆ ಹೆಚ್ಚಾದಾಗ ಅದರ ನೀರಿನ ಕವಲು ಹಾದಿಗಳ ಎಲ್ಲಾ ತೊರೆಗಳೂ ಒಮ್ಮಿ0ದೊಮ್ಮೆಲೇ ವ್ಯಾಪ್ತಿ ಪ್ರದೇಶವನ್ನು ವೃದ್ಧಿಸುತ್ತಾ ರಭಸವಾಗಿ ಕಣಿವೆ ದಾರಿಯ ಜಲಪಾತಗಳಲ್ಲಿ ಧುಮಿಕುತ್ತವೆ. ಆಗ ಜಲಪಾತದ ಕೆಳಗಡೆ ಇರುವವರನ್ನು ನೀರಲ್ಲಿ ಹೋಗುವ ಸಾಧ್ಯತೆ ಹೆಚ್ಚು. ಇನ್ನು ಕೆಲವು ಕಡೆ ಬೆಟ್ಟದ ತಳ ಭಾಗದಲ್ಲಿ ಎಲ್ಲಾದರೂ ಆಣೆಕಟ್ಟು ಕಟ್ಟಿದ್ದರೆ ಮಳೆ ಜಾಸ್ತಿ ಬರುವ ಸಂದರ್ಭದಲ್ಲಿ ಆಣೆಕಟ್ಟು ತುಂಬಿದಾಗ ಗೇಟ್‌ವಾಲ್ ಬಿಟ್ಟಾಗ ಅಥವಾ ಆಣೆಕಟ್ಟು ಮೇಲಿನ ಭಾಗದ ಹೆಚ್ಚುವರಿ ನೀರು ಒಮ್ಮೆಲೇ ಕೆಳಗೆ ಹರಿದಾಗ ಅದೇ ಪ್ರದೇಶದಲ್ಲಿ ಇರುವ ಜಲಪಾತವು ತುಂಬಿ ಹರಿದು ಜನರು ನೀರಲ್ಲಿ ಕೊಚ್ಚಿ ಹೋಗುವ ಅಪಾಯವಿದೆ.
ಇಮತ ಅಪಾಯ ಆದಾಗ ಅದು ಸುದ್ದಿಯಾಗುತ್ತದೆ. ಆದರೂ, ಮುನ್ನೆಚ್ಚರಿಕೆ ವಹಿಸದೇ ಹೋಗುವುದು, ಪ್ರಕೃತಿಯ ಎದುರು ತನ್ನ ತಾಕತ್ತು ತೋರಿಸುವುದು, ಸೆಲ್ಫಿ ಶೋಕಿಗೆ ಕಡಿದಾದ ಪ್ರಪಾತದ ಅಂಚಿಗೆ ಹೋಗಿ ನಿಲ್ಲುವುದಕ್ಕೆ ಕೊನೆ ಬೇಕಿದೆ. ಸಾವು ನೋವು ಕಣ್ಣೆದುರು ಆಗುತ್ತಿರುವುದನ್ನು ನೋಡಿಯೂ ಪಾಠ ಕಲಿಯುವುದಿಲ್ಲವೆಂದರೆ, ಸಾವು ನೋವು ಅನುಭವಿಸಲೆಂದೇ ಜಲಪಾತದ ಕಡೆಗೆ ಹೋಗುತ್ತಿರುವುದಾ ಎಂಬ ಪ್ರಶ್ನೆ ಕಾಡುತ್ತದೆ. ಪ್ರಕೃತಿ ಸೌಂದರ್ಯ ಚಂದ ಹೌದು ಆದರೆ ಅದನ್ನು ಆಸ್ವಾದಿಸುವ ಗೌಜಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಮುಖ್ಯ ತಾನೇ…? ನೆನಪಿಟ್ಟುಕೊಳ್ಳಿ, ಪ್ರಕೃತಿ ಮಡಿಲು ಎಷ್ಟು ಚಂದವೋ ಅಗೋಚರವಾಗಿ ಅಷ್ಟೇ ಅಪಾಯ ಕೂಡಾ ಇದೆ. ಮದ್ಯಪಾನ, ಧೂಮಪಾನ ಮಾಡದೇ, ಅಲ್ಲಿ ಸರ್ಕಸ್ ಕೂಡಾ ಮಾಡದೇ ಜಾಗ್ರತೆಯಿಂದ ಅನುಭವಿಸಿದರೆ ಪ್ರಕೃತಿ ಕೂಡಾ ತನ್ನ ಸೌಂದರ್ಯದ ಎಲ್ಲಾ ಆಯಾಮವನ್ನು ತೆರೆದಿಡುತ್ತದೆ.
– ದಿನೇಶ್ ಹೊಳ್ಳ ಮಂಗಳೂರು, ಸಹ್ಯಾದ್ರಿ ಸಂಚಯ
Discussion about this post