ಉತ್ತರ ಕನ್ನಡ ಸೇರಿ ರಾಜ್ಯದ ಹಲವು ಕಡೆ ಉನ್ನತ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಅವಧಿ ಪೂರ್ಣಗೊಳ್ಳುವ ಮುನ್ನ ಅಧಿಕಾರಿಗಳ ವರ್ಗಾವಣೆ ನಡೆದಿರುವುದರಿಂದ ಕಡತಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದಾಖಲಾಗದ ಅನೇಕ ಸಮಸ್ಯೆಗಳು ಹಾಗೇ ಉಳಿದಿವೆ. ಪ್ರಸ್ತುತ ಆಗಮಿಸಿದ ಹೊಸ ಅಧಿಕಾರಿಗಳಿಗೆ ಸಮಸ್ಯೆ ಎದುರಿಸುತ್ತಿದ್ದವರು ಇದೀಗ ಮತ್ತೊಮ್ಮೆ ಎಲ್ಲವನ್ನು ವಿವರಿಸಿ, ಮನವರಿಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.
ಕಾರವಾರದಲ್ಲಿ ಕ್ರೀಡಾ ಚಟುವಟಿಕೆಯ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಟ್ಟಿ ಅವರಿಗೆ ಕಾರವಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಹನೇಹಳ್ಳಿ ಮನವಿ ಮಾಡಿದ್ದರು. ಅವರು ಕೆಲಸ ಮಾಡಿಕೊಡುವ ಹೊತ್ತಿಗೆ ವರ್ಗಾವಣೆ ಆದರು. ಅದಾದ ನಂತರ ಬಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಬಳಿ ಮತ್ತೆ ಎಲ್ಲಾ ವಿಚಾರಗಳ ಬಗ್ಗೆ ಮನವರಿಕೆ ಮಾಡಲಾಗಿದ್ದು, ಅವರು ಸಹ ಪೂರಕವಾಗಿ ಸ್ಪಂದಿಸಿದ್ದರು. ಆದರೆ, ಆ ಕೆಲಸ ಮಾಡಿಕೊಡುವ ಹೊತ್ತಿನಲ್ಲಿ ಗಂಗೂಬಾಯಿ ಮಾನೇಕರ್ ಸಹ ವರ್ಗವಾದರು. ಇದೀಗ ದಿಲೀಪ್ ಅವರು ಮತ್ತೆ ತಮ್ಮ ಅರ್ಜಿ ಹಿಡಿದು ಅಲೆದಾಡಬೇಕಿದೆ.
ಜಿಲ್ಲಾಧಿಕಾರಿ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಸಹ ನಡೆದಿದೆ. ಪೊಲೀಸರಿಗೆ ಸಂಬoಧಿಸಿ ನಿರ್ಮಿಸಲಾದ ಮನೆಗಳ ಹಂಚಿಕೆ ಕೆಲಸ ಒಂದುವರೆ ವರ್ಷದಿಂದ ಬಾಕಿಯಿದೆ. ಅದನ್ನು ಅರ್ಹರಿಗೆ ವಿತರಿಸುವ ಮುನ್ನ ವರಿಷ್ಠಾಧಿಕಾರಿ ವರ್ಗವಾಗಿದ್ದು, ಸಮಸ್ಯೆ ಹಾಗೇ ಉಳಿದಿದೆ.
ಒಂದೇ ವಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ವರ್ಗಾವಣೆ ನಡೆದಿದ್ದು, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಧಿಕಾರವಹಿಸಿಕೊಂಡು ಒಂದು ವರ್ಷ ಸಹ ಕಳೆದಿರಲಿಲ್ಲ. ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ವಿಷ್ಣುವರ್ಧನ್ ಸಹ ಅವಧಿಗೂ ಮುನ್ನ ವರ್ಗವಾಗಿದ್ದಾರೆ. ಈ ವೇಳೆ ಕೆಲ ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆ ಸಹ ನಡೆದಿದೆ. ಇನ್ನೂ ಅಧಿಕಾರಿಗಳ ವರ್ಗಾವಣೆ ವಿಚಾರ ಸದ್ಯ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮುಜುಗರದ ವಿಷಯವೂ ಹೌದು. `ವರ್ಗಾವಣೆ ದಂದೆ’ ಸಹಿಸುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಸಲ ಹೇಳಿದ್ದು, ಈ ವಿಚಾರ ಬಿಜೆಪಿಯ ಹೋರಾಟಕ್ಕೆ ಅಸ್ತ್ರವಾಗಿದೆ.
Discussion about this post