ಪಶ್ಚಿಮಘಟ್ಟದ ಕಾಡನ್ನು ಹೊದ್ದು ಹಸರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೇನೂ ಬರವಿಲ್ಲ. ಇಲ್ಲಿನ ಯಾವ ದಿಕ್ಕಿಗೆ ಹೋದರೂ ಒಂದಿಲ್ಲ ಒಂದು ಜಲಪಾತ ಸ್ವಾಗತಿಸುತ್ತದೆ. ನದಿ, ತೊರೆ, ಹಳ್ಳಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹುಟ್ಟುವ ಸಣ್ಣ ಸಣ್ಣ ಜಲಪಾತಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೀಗೆ ಮಳೆಗಾಲದಲ್ಲಿ ಹುಟ್ಟುವ ಅನೇಕ ಜಲಪಾತಗಳು ಡಿಸೆಂಬರ್ ಕೊನೆಯವರೆಗೂ ಇರುವುದಿದೆ. ಅಂಥಹುಗಳ ಸಾಲಿನಲ್ಲಿ ಬರುವ ಜಲಪಾತಗಳಲ್ಲಿ `ಗೋಲಾರಿ’ಯೂ ಒಂದು.
ಕಾರವಾರ ತಾಲೂಕಿನ ತೊಡೂರು ಬಳಿ ಗೋಲಾರಿ ಜಲಪಾತವಿದೆ. ಇಲ್ಲಿನ ಪರ್ವತದಿಂದ ಧುಮುಕುವ ನೀರರಾಶಿ ಪ್ರವಾಸಿಗರ ಪಾಲಿಗೆ ಸಾಹಸದ ಖುಷಿ ನೀಡುತ್ತದೆ. ಸುಮಾರು 65 ಅಡಿ ಎತ್ತರದಿಂದ ಇಲ್ಲಿ ನೀರು ಧುಮ್ಮಿಕುತ್ತದೆ. ಜಲಪಾತದ ಮುಂದೆ ನಿಂತವರ ಮನಸ್ಸಿನಲ್ಲಿ ಆಹ್ಲಾದಕರ ಭಾವ ಮೂಡುತ್ತದೆ. ಜಲಪಾತದ ಬುಡದಲ್ಲಿಯೂ ಹೆಚ್ಚು ಆಳವಿಲ್ಲದ ಕಾರಣ ಅಷ್ಟು ಅಪಾಯವೂ ಇಲ್ಲ.
ಕಾರವಾರ ನಗರದಿಂದ 14 ಕಿ.ಮೀ ದೂರದಲ್ಲಿರುವ ತೊಡೂರಿನಿಂದ ಮುಂದೆ ಕಾಡಿನಲ್ಲಿ 3ಕಿಮೀ ವಾಹನದಲ್ಲಿ ಸಂಚರಿಸಿ, ಮುಂದೆ 2ಕಿಮೀ ನಡೆದರೆ ಜಲಪಾತದ ದರ್ಶನ ಸಾಧ್ಯ.
Discussion about this post