ಇದೇ ಮೊದಲ ಬಾರಿ ಸಂಸದರಾದ ಉಮೇದಿಯಲ್ಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲಿಗೆ ಚಕ್ರ ಕಟ್ಟಿಕೊಂಡವರoತೆ ಜಿಲ್ಲೆ ಸುತ್ತಾಡುತ್ತಿದ್ದಾರೆ. ಕಾರ್ಯಕರ್ತರ ಸಮಾವೇಶ, ಅಭಿನಂದನಾ ಸಭೆ ನಡುವೆಯೇ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾರೆ.
ಪ್ರತಿ ದಿನ ಕನಿಷ್ಟ ಎರಡು ಸಭೆಗಳಂತೆ ನಡೆಸುತ್ತಿರುವ ಅವರು ಗುರುವಾರ ಹೆದ್ದಾರಿ ಹಾಗೂ ಬಿ ಎಸ್ ಎನ್ ಎಲ್ ಅಧಿಕಾರಿಗಳನ್ನು ಕರೆಯಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಸೂಚನೆ ನೀಡಿದರು. ಕಾರವಾರ – ಕುಂದಾಪುರ ಐ ಆರ್ ಬಿ ರಸ್ತೆ, ಸಾಗರಮಾಲಾ ಯೋಜನೆಗೆ ಸಂಬoಧಿಸಿ ಅಧಿಕಾರಿಗಳ ಜೊತೆ ಗುತ್ತಿಗೆದಾರರನ್ನು ಕರೆಯಿಸಿ ಚರ್ಚಿಸಿದರು. ಕಾಮಗಾರಿಯಲ್ಲಿನ ವಿಳಂಬ ಹಾಗೂ ಸಾರ್ವಜನಿಕರಿಗೆ ಆಗುವ ಸಮಸ್ಯೆ ಬಗ್ಗೆ ವಿವರಿಸಿದರು.
`ಕೇಂದ್ರದ ಯೋಜನೆಗಳಿಂದ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಸೂಚಿಸಿದರು. ಶಿರಸಿಯಿಂದ ಹಾವೇರಿವರೆಗಿನ ಎರಡನೇ ಹಂತದ ಸಾಗರಮಾಲಾ ಯೋಜನೆಯಲ್ಲಿ ಅವಶ್ಯವಿರುವ ಖಾಸಗಿ ಜಮೀನಿನ ಸರ್ವೆ ಹಾಗೂ ಪರಿಹಾರ ಕಾರ್ಯವನ್ನು ಕೂಡಲೇ ಮುಗಿಸಬೇಕು’ ಎಂದು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಅವಶ್ಯವಿರುವ ತಂಗುದಾಣ ಹಾಗೂ ಅಪಘಾತ ವಲಯದಲ್ಲಿ ನಾಮಫಲಕ ಅಳವಡಿಸುವಂತೆ ತಿಳಿಸಿದರು.
ಬಿ ಎಸ್ ಎನ್ ಎಲ್ ಅಧಿಕಾರಿಗಳಿಗೆ ಗಡುವು:
ಬಿ ಎಸ್ ಎನ್ ಎಲ್ ಅಧಿಕಾರಿಗಳ ಸಭೆ ನಡೆಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ಎರಡು ತಿಂಗಳ ಒಳಗೆ ಎಲ್ಲಾ ಸಮಸ್ಯೆ ಬಗೆಹರಿಸಿ ವರದಿ ನೀಡುವಂತೆ ಸೂಚಿಸಿದರು.
`ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಜನ ಸಂಪರ್ಕ ಸಾಧನ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕ ಹಳ್ಳಿಗಳಲ್ಲಿ ಬಿ ಎಸ್ ಎನ್ ಎಲ್ ನೆಟ್‌ವರ್ಕ ಸಿಗುತ್ತಿಲ್ಲ. ಅರಣ್ಯ ಇಲಾಖೆಯ ಸಮಸ್ಯೆಯನ್ನು ಈಗಾಗಲೇ ನಿವಾರಿಸಲಾಗಿದ್ದು, 78ಕ್ಕೂ ಅಧಿಕ ಟವರ್ ನಿರ್ಮಾಣಕ್ಕೆ ಇದ್ದ ತಡೆ ದೂರವಾಗಿದೆ. ಹೀಗಾಗಿ ತ್ವರಿತಗತಿಯಲ್ಲಿ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
`ಎಫ್‌ಟಿಟಿಎಚ್ ಇಂಟರ್‌ನೆಟ್ ಸಂಪರ್ಕಕ್ಕೆ ಸಂಬoಧಿಸಿ ಅನೇಕ ದೂರುಗಳಿವೆ. ವೇಗದ ಇಂಟರ್‌ನೆಟ್ ಇಲ್ಲದಿರುವಿಕೆ, ದುಬಾರಿಯಾದ ಶುಲ್ಕ, ಉತ್ತಮ ಸೇವೆ ನೀಡದಿರುವಿಕೆ ಸಾಮಾನ್ಯ ದೂರುಗಳಾಗಿವೆ. ಇಂಥ ದೂರುಗಳನ್ನು ನಾನು ಸಹಿಸುವುದಿಲ್ಲ’ ಎಂದು ಹೇಳಿದರು. ಬಿ ಎಸ್ ಎನ್ ಎಲ್ ಕಚೇರಿಯಲ್ಲಿ ಜನರೇಟರ್, ಬ್ಯಾಟರಿ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು. ಸಿಜಿಎಂ ಉಜ್ವಲ್ ಗುಲಾನಿ, ಪಿಜಿಎಂ ನವಿನಕುಮಾರ ಗುಪ್ತಾ, ಎಜಿಎಂ ಬಿಂದು ಸಭೆಯಲ್ಲಿದ್ದರು.
Discussion about this post