ಗೋಕರ್ಣದ ಅಶೋಕೆಯಲ್ಲಿ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಚಾತುರ್ಮಾಸ ನಡೆಸಲಿದ್ದಾರೆ.
`ಅನಾವರಣ ಚಾತುರ್ಮಾಸ್ಯ’ ಎಂಬ ಅಭಿದಾನದೊಂದಿಗೆ 60 ದಿನಗಳ ಕಾಲ ಅವರು ವೃತ ಆಚರಣೆಯಲ್ಲಿ ತೊಡಗಲಿದ್ದಾರೆ. ಈ ವೇಳೆ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ಅವರು ನಿರತರಾಗಲಿದ್ದಾರೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ತಿಳಿಸಿದ್ದಾರೆ.
ಚಾತುರ್ಮಾಸದ ಅವಧಿಯಲ್ಲಿ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಆಗಲಿದೆ. ಚಾತುರ್ಮಾಸದ ಪೂರ್ವಭಾವಿಯಾಗಿ ಜುಲೈ 20ರಂದು ಶ್ರೀಗಳು ಪುರಾತನ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
ಜುಲೈ 24ರಂದು ಶ್ರೀವರ್ಧಂತಿ, ಅಗಸ್ಟ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯ ವಿಶೇಷ ಕಾರ್ಯಕ್ರಮಗಳ ಜೊತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸದ ಪಟ್ಟಿಯಲ್ಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಈ ವೇದಿಕೆ ಒಳಗೊಂಡಿದೆ.
Discussion about this post