ಕಾರವಾರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿ ಜನರ ಸಾವು-ನೋವುಗಳಿಗೆ ಕಾರಣವಾದ ಗುತ್ತಿಗೆ ಕಂಪನಿ `ಐ ಆರ್ ಬಿ’ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚಿಸಿದ್ದಾರೆ.
ಅಂಕೋಲಾ ತಾಲೂಕಿನ ಶಿರೂರು ಸಮೇತ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಬಗ್ಗೆ ಜುಲೈ 17ರಂದು ಪರಿಶೀಲಿಸಿದ ಅವರು ಈ ಕುರಿತಂತೆ ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
`ಅಂಕೋಲಾ ತಾಲೂಕಿನ ಶಿರೂರುನಲ್ಲಿ ಗುಡ್ಡ ಕುಸಿತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣ. ಮೃತರ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆ ಕಂಪನಿ ನೇರ ಹೊಣೆ’ ಎಂದು ಅವರು ಗುಡುಕಿದರು. `ಹೆದ್ದಾರಿ ಕಾಮಗಾರಿಯಿಂದ ಸಾವಿರಾರು ಮಂದಿ ಸಾವನಪ್ಪಿದ್ದಾರೆ. ರಸ್ತೆ ಕಾಮಗಾರಿಯನ್ನು ಯಾವಾಗ ಮುಕ್ತಾಯಗೊಳಿಸುತ್ತೀರಿ? ಎಂಬ ಪ್ರಶ್ನೆಗೂ ಗುತ್ತಿಗೆ ಕಂಪನಿ ಉತ್ತರಿಸುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು. `ಈ ಪ್ರಶ್ನೆಗೆ ಉತ್ತರ ಬರುವವರೆಗೂ ಜಿಲ್ಲಾಡಳಿತದಿಂದ ಗುತ್ತಿಗೆ ಕಂಪನಿಗೆ ಸಹಕಾರ ಕೊಡಲಾಗುವುದಿಲ್ಲ’ ಎಂದು ಹೇಳಿದರು.
Discussion about this post