ಅಂಕೋಲಾ: ಎಲ್ಲಿಂದಲೋ ಬಂದ ಬೀದಿ ನಾಯಿಗೆ ಶಿರೂರು ಅಂಗಡಿಯವರು ಊಟ ಹಾಕಿದ್ದರು. ಅಂದಿನಿoದ ಇಂದಿನವರೆಗೂ ಆ ನಾಯಿ ಅಂಗಡಿಯ ಕಾವಲಿಗಿದ್ದು, ಗುಡ್ಡ ಕುಸಿತದಲ್ಲಿ ಅನ್ನ ನೀಡಿದವರು ಸಾವನಪ್ಪಿದರೂ ನಾಯಿ ಮಾತ್ರ ಅಲ್ಲಿಂದ ಕದಲುತ್ತಿಲ್ಲ.
ಮಾಹಿತಿಗಳ ಪ್ರಕಾರ ಎರಡು ವರ್ಷದ ಹಿಂದೆ ಲಾರಿಯವರೊಬ್ಬರು ಆ ನಾಯಿಯನ್ನು ಹೆದ್ದಾರಿ ಪಕ್ಕ ಬಿಟ್ಟು ಹೋಗಿದ್ದರು. ಇನ್ನೂ ಪುಟ್ಟ ಮರಿಯಾಗಿದ್ದ ನಾಯಿಗೆ ಅಲ್ಲಿನವರು ಬಿಸ್ಕೆತ್ ಹಾಕಿದ್ದರು. ಅಷ್ಟಕ್ಕೆ ನಿಷ್ಟೆ ತೋರಿದ ಶ್ವಾನ ಅಂಗಡಿಯ ಕಾವಲಿಗಿತ್ತು. ರಾತ್ರಿ ವೇಳೆ ಅಪರಿಚಿತರು ಬಂದರೂ ಮಾಲಕರಿಗೆ ಸೂಚನೆ ನೀಡುತ್ತಿತ್ತು. ಯಾರೂ ಎಲ್ಲೇ ಹೋದರೂ ಅವರ ಹಿಂದೆ ಬರುತ್ತಿತ್ತು. ಮಕ್ಕಳ ಪಾಲಿಗೆ ಆ ನಾಯಿ ಆಟದ ಬೊಂಬೆಯೂ ಆಗಿತ್ತು. ನಾಯಿಯ ನಿಷ್ಟೆಗೆ ಮನಸೋತ ಅಂಗಡಿಕಾರರು ನಿತ್ಯ ತಿನಿಸುಗಳನ್ನು ನೀಡುತ್ತಿದ್ದರು. ಅಂಗಡಿಗೆ ಬಂದು ಹೋಗುತ್ತಿದ್ದವರ ಮೇಲೆ ನಿಗಾ ಇಡುತ್ತಿದ್ದ ಆ ನಾಯಿಯ ಬಗ್ಗೆ ಸುತ್ತಲಿನವರಿಗೂ ಅಕ್ಕರೆ ಬೆಳೆದಿತ್ತು. ಆದರೆ, ಆ ಮನೆಯವರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿದ್ದ ಶ್ವಾನ ಇದೀಗ ಅನಾಥವಾಗಿದೆ.
ಮಂಗಳವಾರ ಕುಸಿತ ಗುಡ್ಡದಿಂದ ಒಂದೇ ಕುಟುಂಬದ ಐದು ಜನ ಸಾವನಪ್ಪಿದ್ದು, ಅದೇ ಮನೆಯ ಸದಸ್ಯನಂತೆ ಇದ್ದ ನಾಯಿ ಬದುಕುಳಿದಿದೆ. ಗುಡ್ಡ ಕುಸಿತ ಸ್ಥಳದಲ್ಲಿಯೇ ತಿರುಗಾಡುತ್ತಿರುವ ನಾಯಿ ತನ್ನವರನ್ನು ಕಳೆದುಕೊಂಡ ನೋವಿನಲ್ಲಿದೆ. ನಾಯಿಯನ್ನು ನೋಡಿದ ಅನೇಕರು ಆಹಾರ ನೀಡಿದರೂ ಅದನ್ನು ಮುಟ್ಟಿಲ್ಲ. ಬುಧವಾರ ಸಂಜೆಯವರೆಗೂ ಪದೇ ಪದೇ ಮಣ್ಣಿನ ರಾಶಿ ಬಳಿ ತೆರಳುವುದು, ಅಲ್ಲಿ ಅತ್ತ-ಇತ್ತ ಮೂಸುವುದರಲ್ಲಿ ನಾಯಿ ಮಗ್ನವಾಗಿದ್ದು, ಈ ದೃಶ್ಯಾವಳಿಗಳು ನೋಡುಗರ ಮನಕಲಕುವಂತಿದೆ.
Discussion about this post