ಯಲ್ಲಾಪುರ: ‘ಅಹಂಕಾರ, ತೇಜೋವಧೆ ಹಾಗೂ ವೈಯಕ್ತಿಕ ಪ್ರತಿಷ್ಠೆಗೆ ಒಳಗಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವು ಪಡೆದು ಸಮಸ್ಯೆಗೆ ಸ್ಪಂದಿಸುವ ಬದಲು ಕೆಸರಾಟದಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ದೂರಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಲ್ಲರೂ ಚುನಾವಣೆ ವೇಳೆ ರಾಜಕಾರಣ ಮಾಡುತ್ತಾರೆ. ಚುನಾವಣೆ ನಂತರ ಜನಪರವಾಗಿ ಕೆಲಸ ಮಾಡುತ್ತಾರೆ. ಆದರೆ, ತಾಂತ್ರಿಕವಾಗಿ ಬಿಜೆಪಿಯಲ್ಲಿರುವ ಶಿವರಾಮ ಹೆಬ್ಬಾರ್ ಅನಗತ್ಯವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಿಡಿಕಾರುತ್ತಿದ್ದಾರೆ’ ಎಂದು ಆರೋಪಿಸಿದರು.
‘ವಿಶ್ವೇಶ್ವರ ಹೆಗಡೆ ಕಾಗೇರಿ ಅತ್ಯಂತ ಸಜ್ಜನರು. ತತ್ವ-ಸಿದ್ಧಾಂತ ನಂಬಿದವರು. ಹೋರಾಟದಲ್ಲಿದ್ದವರು. ಈ ಎಲ್ಲಾ ಹಿನ್ನಲೆ ಪಕ್ಷದ ಜೊತೆ ವೈಯಕ್ತಿಕ ವರ್ಚಸ್ಸಿನಿಂದ ಅವರು ಗೆದ್ದು ಸಂಸದರಾಗಿದ್ದಾರೆ. ಆ ಗೆಲುವಿನ ಬಗ್ಗೆ ಕುಹಕ ಮಾಡಿದ್ದು ಸರಿಯಲ್ಲ’ ಎಂದರು.
‘ಬಿಜೆಪಿ ಪಕ್ಷದ ಚಿಹ್ನೆಯ ಅಡಿ ಗೆದ್ದ ಶಿವರಾಮ ಹೆಬ್ಬಾರ್ ಇದೀಗ ಪಕ್ಷ ವಿರೋಧಿಯಾಗಿದ್ದು, ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಲಿ’ ಎಂದು ಮುಂಡಗೋಡಿನ ಎಲ್ ಟಿ ಪಾಟೀಲ ಆಗ್ರಹಿಸಿದರು.
ಪ್ರಮುಖರಾದ ಉಮೇಶ ಭಾಗ್ವತ ಮಾತನಾಡಿ ‘ಬಿಜೆಪಿ ಹಾಗೂ ಶಾಸಕ ಹೆಬ್ಬಾರ್ ಅವರ ನಡುವಿನ ಸಂಸ್ಕಾರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಸುಬ್ಬಣ್ಣ ಬೋಳ್ಮನೆ ಗಣಪತಿ ಬೋಳಗುಡ್ಡೆ ಇತರರು ಇದ್ದರು.
Discussion about this post