ಮದ್ಯ ವ್ಯಸನ ತ್ಯಜಿಸಿದ ಇಬ್ಬರನ್ನು ಸಾಧಕರು ಎಂದು ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ಅವರಿಗೆ ಸನ್ಮಾನಿಸುವ ಮೂಲಕ ಗೌರವಿಸಿದೆ. ಆ ಮೂಲಕ ದುಶ್ಚಟದಿಂದ ದೂರವಾದವರನ್ನು ಮುಖ್ಯವಾಹಿನಿಗೆ ಪರಿಚಯಿಸುವ ಕೆಲಸ ಮಾಡಿದೆ.
ಮದ್ಯ ವ್ಯಸನಕ್ಕೆ ಒಳಗಾದವರು ನಂತರ ಆ ದುಷ್ಚಟದಿಂದ ಹೊರಬರುವ ಸಾಧ್ಯತೆ ಕಡಿಮೆ. ಒಮ್ಮೆ ಚಟಕ್ಕೆ ದಾಸರಾದವರು ನಂತರ ಅದನ್ನು ತ್ಯಜಿಸುವುದು ದೊಡ್ಡ ಸಾಧನೆ. ಹೀಗಾಗಿ ಈ ಸಾಧನೆ ಗುರುತಿಸಿ ಗೌರವಿಸಲಾಗಿದೆ. ಸನ್ಮಾನ ಸ್ವೀಕರಿಸಿದ ಮಾರುತಿ ಹುವಾ ಗೌಡ ಬಿಣಗಾ ಮಾತನಾಡಿ `ಮದ್ಯ ಸೇವನೆಯಿಂದ ನನ್ನ ಆರೋಗ್ಯ ಹಾಳಾಗಿತ್ತು. ಸರಿಯಾಗಿ ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಇದೀಗ ಸಂಪೂರ್ಣವಾಗಿ ವ್ಯಸನದಿಂದ ಹೊರಬಂದು ಸಾರ್ಥಕ ಜೀವನ ನಡೆಸುತ್ತಿದ್ದೇನೆ. 14 ವರ್ಷದಿಂದ ಕುಡಿತ ಬಿಟ್ಟಿದ್ದು, ಉಳಿತಾಯದ ಹಣದಲ್ಲಿ ಹೊಸ ಮನೆ ನಿರ್ಮಿಸಿದ್ದೇನೆ’ ಎನ್ನುತ್ತ ಭಾವುಕರಾದರು. ಬಿಣಗಾದ ಸುರೇಶ ನಾಗಪ್ಪ ಗೌಡ ಮಾತನಾಡಿ `ವ್ಯಸನದಿಂದ ದೂರವಾದ ನಂತರ ಸಮೃದ್ಧ ಬದುಕು ಸಾಧ್ಯ ಎಂದು ತಾನೂ ಅರಿತಿದ್ದೇನೆ’ ಎಂದರು.
ಮನೋವೈದ್ಯ ಡಾ.ಸುಹಾಸ್ ಮಾತನಾಡಿ `ದುಶ್ಚಟಗಳು ವ್ಯಕ್ತಿಯ ವೈಯಕ್ತಿಕ ಬದುಕು, ಕುಟುಂಬದ ಜೊತೆ ಸಮಾಜವನ್ನು ಹಾಳು ಮಾಡುತ್ತದೆ. ಮಾದಕ ವಸ್ತುಗಳ ಸೇವನೆ ಮೆದುಳಿಗೂ ಹಾನಿಕಾರಕ’ ಎಂದರು. ಅವರಿಬ್ಬರ ಸಾಧನೆಗೆ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ ಶಂಕರ್ ರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.




Discussion about this post