ಕಾರವಾರ: ಕಾಳಿ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಯ ಮೇಲೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದೇ ಸೇತುವೆ ಮೇಲೆ ದ್ವಿಮುಖ ಸಂಚಾರ ಶುರುವಾಗಿದೆ. ಆದರೆ, ರಾತ್ರಿ ಸಂಚರಿಸಲು ಇಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ!
`ಹೆದ್ದಾರಿ ಅಗಲೀಕರಣದ ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಹೊಸ ಸೇತುವೆಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ. ಬೀದಿ ದೀಪಗಳ ಅಳವಡಿಕೆಗೆ ಅಗತ್ಯವಿರುವ ಕಂಬಗಳನ್ನು ಸಹ ನಿರ್ಮಿಸಿಲ್ಲ. ಹಳೆಯ ಸೇತುವೆಗೆ ಬೀದಿ ದೀಪಗಳಿದ್ದು, ಅದೇ ಬೆಳಕಿನ ಅಡಿ ಹೊಸ ಸೇತುವೆ ಮೇಲೆ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಹಳೆ ಸೇತುವೆ ಸಹ ನಿನ್ನೆ ಕುಸಿತ ಕಂಡಿದ್ದು, ಅದರ ಜೊತೆ ದೀಪಗಳು ನೀರು ಪಾಲಾಗಿದೆ’ ಎಂದು ಜಯ ಕರ್ನಾಟಕ ಜನಪರ ಸಂಘಟನೆಯ ರೋಷನ್ ಹರಿಕಂತ್ರ ಹಾಗೂ ಸುದೇಶ್ ನಾಯ್ಕ ದೂರಿದರು.
`ಕಾಳಿ ನದಿಗೆ ಅಡ್ಡಲಾಗಿರುವ ಸೇತುವೆ ಅಂದಾಜು 1ಕಿಮೀ ಉದ್ದವಿದೆ. ಸೇತುವೆ ಶುರುವಿನಲ್ಲಿ ಬೆಳಕಿಗೆ ಒಂದು ಲೈಟ್ ಅಳವಡಿಸಲಾಗಿದ್ದು, ಅದೂ ಸೇತುವೆ ಕಡೆ ಮುಖ ಮಾಡಿಲ್ಲ. ಇದನ್ನು ಹೊರತುಪಡಿಸಿ ಇಡೀ ಸೇತುವೆ ಮೇಲೆ ಎಲ್ಲಿಯೂ ಬೆಳಕಿನ ಕಿರಣಗಳು ಕಾಣುವುದಿಲ್ಲ’ ಎಂದು ಸಂಘಟನೆಯ ಪ್ರದೀಪ ಶೆಟ್ಟಿ ಮತ್ತು ರಫೀಕ್ ಹುದ್ದಾರ್ ದೂರಿದರು.
`ಕಾಳಿ ಸೇತುವೆ ಮೇಲೆ ಅನೇಕ ಪಾದಚಾರಿಗಳು ಓಡಾಡುತ್ತಾರೆ. ವಾಹನಗಳಿಗಿರುವ ದೀಪಗಳು ಸಹ ಪದೇ ಪದೇ ಹಾಳಾಗುತ್ತದೆ. ಸೇತುವೆಗೆ ಬೆಳಕು ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದ್ದು, ತಕ್ಷಣ ಗುತ್ತಿಗೆ ಕಂಪನಿ ಬೀದಿ ದೀಪ ಅಳವಡಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಆಗ್ರಹಿಸಿದರು.
`ಬೆಳಕಿನ ವ್ಯವಸ್ಥೆ ಮಾಡದೇ ಇದ್ದಲ್ಲಿ ಪ್ರತಿಭಟಿಸುವುದು ಅನಿವಾರ್ಯ’ ಎಂದು ಸುನೀಲ್ ತಾಂಡೆಲ್, ಮೋಹನ ಉಳ್ವೇಕರ್ ಎಚ್ಚರಿಸಿದರು.





Discussion about this post