ಶಿರಸಿ: ಕಂಡ ಕಂಡಲ್ಲಿ ಕವಳ (ಎಲೆ – ಅಡಿಕೆ) ಉಗುಳುವವರ ಮೇಲೆ ಪೊಲೀಸರು `ಕಠಿಣ ಕ್ರಮ’ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಎಲೆ ಅಡಿಕೆ ಹಾಕಿ ಅವರಿವರ ಮೇಲೆ ಉಗಿದರೆ ರಾಜಿಯೇ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಕವಳ ಉಗಿದರೂ ಇನ್ಮುಂದೆ ನ್ಯಾಯಾಲಯ ಅಲೆದಾಟ ತಪ್ಪಿದ್ದಲ್ಲ!
ಶನಿವಾರ ರಾತ್ರಿ ಒಂದು ತಾಸು ನಗರ ಸಂಚಾರ ನಡೆಸಿದ ಪೊಲೀಸರಿಗೆ 61 ಜನ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಪೊಲೀಸರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಅಧಿಕಾರ ಇಲ್ಲದ ಕಾರಣ ಎಲ್ಲರ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಕವಳದ ಜೊತೆ ಗುಟಕಾ ಸೇವಿಸಿ ಉಗಿದವರ ವಿರುದ್ಧ ಸಹ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಈ ವೇಳೆ ವಿವಿಧ ಗೂಡಂಗಡಿಗಳಿಗೆ ಭೇಟಿ ನೀಡಿದ ಪಿಸೈ ನಾಗಪ್ಪ ಅವರು ಅಂಗಡಿ ಮಾಲಕರಿಗೂ ಅರಿವು ಮೂಡಿಸಿದರು.
ಈ ಹಿನ್ನಲೆ ಸ್ವಯಂ ಪ್ರೇರಣೆಯಿಂದ ಕವಳ ತೂಪುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು ಸಿಪಿ ಬಜಾರ, ಬಿಡ್ಕಿ ಬೈಲ್, ಐದು ರಸ್ತೆ, ನಟರಾಜ ರಸ್ತೆ ಇನ್ನಿತರ ಕಡೆ ಸಂಚಾರ ನಡೆಸಿದರು. ಆಗ ಅಲ್ಲಲ್ಲಿ ಕವಳ ಉಗಿಯುತ್ತಿದ್ದವರನ್ನು ಕರೆದು ಬುದ್ದಿ ಹೇಳಿದರು. ಕಂಡ ಕಂಡಲ್ಲಿ ಕವಳ ಉಗಿಯುವುದರಿಂದ ಆಗುವ ಸಮಸ್ಯೆ ಹಾಗೂ ರೋಗ ಹರಡುವಿಕೆಯ ಬಗ್ಗೆ ಮೊದಲ ಹಂತದಲ್ಲಿ ಈ ಕಾರ್ಯಾಚರಣೆ ನಡೆಸಿದ ಪೊಲೀಸರು, ಇನ್ನಷ್ಟು ಪ್ರಕರಣ ದಾಖಲಿಸುವ ಸಾಧ್ಯತೆ ಹೆಚ್ಚಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳ ಮೇಲೆ ಸಂಚರಿಸುವಾಗ ಅನೇಕರು ಕವಳ ಉಗಿಯುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವೈದ್ಯ ಡಾ ರವಿಕಿರಣ ಪಟವರ್ಧನ್ ಈ ಬಗ್ಗೆ ಸಾರಿಗೆ ಇಲಾಖೆಯವರ ಗಮನಕ್ಕೆ ತಂದಿದ್ದು, ಅವರು ಪೊಲೀಸರಿಗೆ ದೂರುವಂತೆ ತಿಳಿಸಿದ್ದರು. ಕವಳ ಉಗುಳುವವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇದನ್ನು ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ್ ತುರ್ತು ಕ್ರಮಕ್ಕೆ ಸೂಚಿಸಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ ಜಯಕುಮಾರ, ಎಂ ಜಗದೀಶ್, ಹಾಗೂ ಡಿವೈಎಸ್ಪಿ ಗಣೇಶ ಕೆಎಲ್ ಸಹ ಈ ವಿಷಯವವನ್ನು ಗಂಭೀರವಾಗಿ ಪರಿಗಣಿಸಿದ್ದರು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಕ್ಕಾಗಿ ಸಿಪಿಐ ಶಶಿಕಾಂತ ವರ್ಮಾ ಪಿಸೈ ನಾಗಪ್ಪ ಕುಂಬಾರ ಅವರ ಜೊತೆ ಚರ್ಚಿಸಿದ್ದು, ಎಸೈ ಗೀತಾ ಗರಗ, ಹೊನ್ನಪ್ಪ ಅಗೇರ, ಸಂತೋಷ ಚಿತ್ರಗಿ, ಅರುಣ ಲಮಾಣಿ, ಮಂಜು ಕಾಶಿಕೋವಿ, ದೀಪಾ ಹರಿಜನ, ಭೀಮಪ್ಪ ಇತರರು ಅಲ್ಲಲ್ಲಿ ದಾಳಿ ನಡೆಸಿ ಕವಳದ ವಿರುದ್ಧ ಜಾಗೃತಿ ಕಾರ್ಯಾಚರಣೆ ನಡೆಸಿದರು.




Discussion about this post