Water | ಕಾವೇರಿ ಬೇಡ-ಶರಾವತಿ ಬೇಕು: ಜಿಲ್ಲೆಯ ನೀರಿಗೆ ಬೇಡಿಕೆ ಇಟ್ಟ ಬೆಂಗಳೂರಿಗರು!
ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳಲ್ಲಿ ಒಂದಾದ ಶರಾವತಿ ನೀರಿಗಾಗಿ (Water) ಬೆಂಗಳೂರಿನಿoದ ಬೇಡಿಕೆ ಬಂದಿದ್ದು, ಇದನ್ನು ಜಿಲ್ಲೆಯ ಜನ ವಿರೋಧಿಸಿದ್ದಾರೆ. ಶರಾವತಿಯ ನೀರನ್ನು ರಾಜಧಾನಿ ಬೆಂಗಳೂರು ಮತ್ತು ಪೂರ್ವ ಕರ್ನಾಟಕದ ಜಿಲ್ಲೆಗಳಿಗೆ ಒಯ್ಯುವುದನ್ನು ತಡೆಯುವಂತೆ ಸರ್ಕಾರದ ಮೇಲೆ ಅನೇಕರು ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಹೊನ್ನಾವರದ ಹಲವು ಸಂಘಟನೆಗಳ ಪ್ರಮುಖರು ಸಭೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದ್ದಾರೆ.
`ಶರಾವತಿ ನದಿಯಲ್ಲಿ ಬೇಸಿಗೆ ಅವಧಿಯಲ್ಲಿ 25ಕಿಮೀವರೆಗೆ ಸಮುದ್ರದ ಉಪ್ಪು ನೀರು ಹಿಮ್ಮುಖವಾಗಿ ಬರುತ್ತಿದೆ. ಇದರಿಂದ ಹಲವೆಡೆ ಜನರು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಶರಾವತಿ ನದಿಪಾತ್ರದಲ್ಲಿ 10ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಮೂಲಕ ರೈತರ ಕೃಷಿ ಭೂಮಿಗೆ ಸರ್ಕಾರ ಈಗಾಗಲೇ ನೀರಾವರಿ ಸೌಲಭ್ಯವನ್ನು ಕಲ್ಪಿಸಿದೆ. ಶರಾವತಿಯಿಂದ ಹೊನ್ನಾವರ ನಗರ, ಗ್ರಾಮೀಣ ಭಾಗಕ್ಕೆ ಮತ್ತು ಮುರುಡೇಶ್ವರ, ಇಡಗುಂಜಿ ಯಾತ್ರಾ ಸ್ಥಳಗಳಿಗೆ ನೀರು ಪೂರೈಕೆ ನಡೆದಿದೆ’ ಎಂದವರು ವಿವರಿಸಿದರು.
`ಹೊನ್ನಾವರ ನಗರಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಆರಂಭಿಸಿದ ನಂತರ ಬೇಸಿಗೆಯಲ್ಲಿ ಸಮುದ್ರದ ಉಪ್ಪು ನೀರು ಶರಾವತಿ ನದಿ ನೀರಿಗೆ ಸೇರಿದ್ದು, ನದಿಯಲ್ಲಿ ಸಿಹಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ನದಿಪಾತ್ರದ ರೈತರ ಮತ್ತು ಕುಡಿಯುವ ನೀರನ್ನು ಅವಲಂಬಿಸಿರುವ ಲಕ್ಷಾಂತರ ಜನರ ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗಿರುವಾಗ ಶರಾವತಿಯಿಂದ ಬೇರೆ ತಾಲೂಕುಗಳಿಗೆ ನೀರಿನ ಪೂರೈಕೆ ಮಾಡುವ ಹೊಸ ಯೋಜನೆಗೆ ಕಡಿವಾಣ ಅಗತ್ಯ’ ಎಂದವರು ಹೇಳಿದ್ದಾರೆ.
ಹೊನ್ನಾವರದ ಭಾರತೀಯ ಸೇವಾದಳದ ಅಧ್ಯಕ್ಷ ಯೋಗೀಶ ರಾಯ್ಕರ್, ಮರಳು ಪರವಾನಗಿದಾರರ ಅಧ್ಯಕ್ಷ ವಿನೋದ ನಾಯ್ಕ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್.ಗೌಡ, ದೇವರಾಜ ಅರಸು ವಿಚಾರ ವೇದಿಕೆಯ ಜಿಲ್ಲಾಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಕರಾವಳಿ ಮೀನುಗಾರ ಸಂಘಟನೆಯ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಶ ತಾಂಡೇಲ್ ಇತರರು ಸರ್ಕಾರಕ್ಕೆ ಪತ್ರ ರವಾನಿಸಿದವರಾಗಿದ್ದಾರೆ.
