ಶಿರೂರು ಗುಡ್ಡ ಕುಸಿತದಿಂದ ಜಗನ್ನಾಥ ನಾಯ್ಕ ಎಂಬಾತರು ಕಣ್ಮರೆಯಾಗಿದ್ದು, ಅವರ ಕುಟುಂಬದವರಿಗೆ ನೀಡಿದ ಒಂದೇ ಒಂದು ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ (Ishwar malpe) ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ.
ಗಂಗಾವಳಿ ನದಿ ಹರಿವು ರಭಸವಾಗಿದ್ದರೂ ತಮ್ಮ ಜೀವದ ಹಂಗು ತೊರೆದು ಅವರು ಅಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈಶ್ವರ ಮಲ್ಪೆ ಅವರ ಜೊತೆ ಇನ್ನೂ ಮೂವರು ಉತ್ಸಾಹಿ ಈಜುಗಾರರಿದ್ದು, ನೀರಿನ ಆಳದಲ್ಲಿ ನಿರಂತರ ಎರಡು ಗಂಟೆಗಳ ಕಾಲ ಶೋಧ ನಡೆಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಇದಲ್ಲದೇ 10ಕ್ಕೂ ಅಧಿಕ ಜನ ಆ ತಂಡದ ಸದಸ್ಯರಾಗಿದ್ದಾರೆ. ಯಾರಿಗೂ ಇಲ್ಲದ ತಾಳ್ಮೆ, ಊಹಿಸಿಕೊಳ್ಳಲಿಕ್ಕೂ ಆಗದಷ್ಟು ಸಹನೆ, ನೊಂದವರನ್ನು ಕಂಡರೆ ಅದೇ ಪ್ರಮಾಣದ ಕರುಣೆ ಈ ತಂಡದವರದ್ದಾಗಿದೆ. `ಉಚಿತ ಸೇವೆ’ ಎಂದು ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಶಿರೂರು ಗುಡ್ಡದ ತಪ್ಪಲಿನಲ್ಲಿ ಇಷ್ಟು ದಿನಗಳ ಕಾಲ ದುಡಿದರೂ ಈವರೆಗೆ ಜಿಲ್ಲಾಡಳಿತದಿಂದ ಕಿಂಚಿತ್ತು ಕಾಸು ಬೇಡಿಲ್ಲ. ಸನ್ಮಾನ-ಪುರಸ್ಕಾರಗಳನ್ನು ಸಹ ಸ್ವೀಕರಿಸಿಲ್ಲ!
ಗುಡ್ಡ ಕುಸಿತದಿಂದ 8 ಮಂದಿ ಸಾವನಪ್ಪಿದ್ದು, ಮೂವರು ಕಣ್ಮರೆಯಾಗಿದ್ದಾರೆ. ಅವರು ಸಹ ಬದುಕಿರುವ ಸಾಧ್ಯತೆಗಳಿಲ್ಲ. ಆದರೂ, ಈಶ್ವರ ಮಲ್ಪೆ ಕಣ್ಮರೆಯಾದ ಜಗನ್ನಾಥ ನಾಯ್ಕರ ಮೂವರು ಮಕ್ಕಳಿಗೆ ಅವರ ತಂದೆಯನ್ನು ಹುಡುಕಿಕೊಡುವುದಾಗಿ ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅವರು ದಿನವಿಡೀ ಶ್ರಮಿಸುತ್ತಿದ್ದಾರೆ. ಈಶ್ವರ ಮಲ್ಪೆ ಅವರು ನೀಡಿದ ಮಾತು ಜಗನ್ನಾಥ ನಾಯ್ಕ ಅವರ ಕುಟುಂಬಕ್ಕೆ ತಂದೆಯ ಶವವನ್ನಾದರೂ ನೋಡಲು ಸಿಗಬಹುದು ಎಂಬ ಆಶಾಭಾವನೆ ಮೂಡಿಸಿದೆ.
ಹೇಗಿರುತ್ತೆ ಕಾರ್ಯಾಚರಣೆ?
ಈಶ್ವರ ಮಲ್ಪೆ ನದಿಗೆ ಇಳಿಯುವ ಮುನ್ನ ಮೊದಲು ಈಶ್ವರನನ್ನು ನೆನೆಯುತ್ತಾರೆ. ಅದಾದ ನಂತರ ಆ ಕ್ಷೇತ್ರದ ಗ್ರಾಮ ದೇವರಿಗೆ ನಮಸ್ಕರಿಸುತ್ತಾರೆ. ನೀರಿಗೆ ಇಳಿದ ನಂತರವೂ ನಿಮಿಷಗಳ ಕಾಲ ಕೈ ಮುಗಿದು ಪ್ರಾರ್ಥಿಸುತ್ತಾರೆ.
ಅದಕ್ಕೂ ಮುನ್ನ ಬೆನ್ನಿಗೆ ಆಕ್ಸಿಜನ್ ಅಳವಡಿಸಿಕೊಂಡು ನೀರಿನ ಆಳದ ಶೋಧಕ್ಕೆ ಯೋಗ್ಯವಿರುವ ಬ್ಯಾಟರಿಯನ್ನು ಪರೀಕ್ಷಿಸುತ್ತಾರೆ. ನೀರಿನ ಒಳಗೆ ಧುಮುಕಿದ ನಂತರ ತಮ್ಮ ಕೈಯಲ್ಲಿರುವ ಕಬ್ಬಿಣದ ರಾಡ್ ಹಿಡಿದು ಅನುಮಾನವಿದ್ದ ಕಡೆ ಮಣ್ಣು ಕೆದಕಿ ಶೋಧ ನಡೆಸುತ್ತಾರೆ. ಏನಾದರೂ ಕಂಡಲ್ಲಿ ತಕ್ಷಣ ಇತರರಿಗೆ ಮಾಹಿತಿ ನೀಡಿ, ಅವರ ನೆರವನ್ನು ಪಡೆದು ಕಾರ್ಯಾಚರಣೆ ನಡೆಸುತ್ತಾರೆ.
Discussion about this post