ಯಕ್ಷಗಾನದ ( Yakshagana ) ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಕರ್ಕಿನಬೈಲ್’ನ ಗುಣವಂತ ಗೌಡ ಅವರಿಗೆ ಪಾರ್ಶವಾಯು ತಾಗಿದ್ದು, ಯಕ್ಷ ಬದುಕಿಗೆ ಸವಾಲಾಯಿತು. ಕೈ-ಕಾಲು ಆಡಲು ಆಗದ ಸ್ಥಿತಿಯಲ್ಲಿರುವ ಅವರಿಗೆ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಆದರೂ ಅವರಲ್ಲಿನ ಕಲಾಪ್ರೇಮ ಒಂಚೂರು ಕಡಿಮೆಯಾಗಿಲ್ಲ.
ಕರ್ಕಿನಬೈಲ್’ನ ಗುಣವಂತ ಗೌಡ ಓದಿದ್ದು 4ನೇ ತರಗತಿ. ಅವರ ತಂದೆ ನಾರಾಯಣ ಗೌಡರು ಹಾಗೆಯೇ ಅವರ ದೊಡ್ಡಪ್ಪ, ಚಿಕ್ಕಪ್ಪಂದಿರ ಮೂಲಕ ಗುಣವಂತ ಗೌಡರು ಯಕ್ಷಗಾನ ( Yakshagana ) ಪ್ರವೇಶಿಸಿದರು. ಅವರ ತಂದೆ ಸ್ಥಳೀಯ ಯಕ್ಷಗಾನಗಳಿಗೆ ಮಗನನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಪ್ರತಿದಿನ ಸಂಜೆ ಎಲ್ಲ ಮಕ್ಕಳನ್ನು ಸೇರಿಸಿಕೊಂಡು ತಾಳ ಅಭ್ಯಾಸ ಮಾಡಿಸುತ್ತಿದ್ದರು. ಇದರಿಂದ ಅವರಲ್ಲಿ ಯಕ್ಷಗಾನದ ಬಗೆಗಿನ ಆಸಕ್ತಿ ಬೆಳೆಯಿತು.
ಪ್ರಾಥಮಿಕವಾಗಿ ತಮ್ಮ ಮನೆಯಲ್ಲಿ ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಯಕ್ಷಗಾನ ( Yakshagana ) ಅಭ್ಯಾಸ ಮಾಡಿದರು. ಕಲಿಕೆಯ ಜೊತೆಗೆ ಪಾತ್ರ ಮಾಡುವ ಅವಕಾಶವನ್ನು ತಂದೆಯವರು ಒದಗಿಸಿಕೊಡುತ್ತಿದ್ದರು. ಆಗ ಎಲ್ಲಾ ಸ್ಥಳೀಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದವರು ಧೂಪದಮನೆ ರಾಮ ಭಾಗ್ವತ್ ಅವರು. ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡುವುದರ ಜೊತೆ ಜೊತೆಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಸದಾವಕಾಶ ಪಡೆದರು. ರಾಮಸ ಭಾಗವತರ ಆಶೀರ್ವಾದ ಹಾಗೂ ವೆಂಕಣ್ಣ ಗೌಡ ಕರ್ಕಿನಬೈಲ್, ಹರಿ ಗೌಡ ಕುಂಬ್ರಿ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರದ ಬಿಸಗೋಡ, ಶಿವಪುರ, ಕುಚಗಾಂವ್, ಬೀರಗದ್ದೆ, ದೋಣಗಾರ ಸೇರಿದಂತೆ ಹಲವು ಭಾಗಗಳಲ್ಲಿ ಅವರು ವೇಷ ಕಟ್ಟಿದ್ದಾರೆ. ಯಕ್ಷರಂಗದಲ್ಲಿ ಸಹಕಲಾವಿದರಾದ ವೆಂಕಣ್ಣ ಕರ್ಕಿನಬೈಲ್, ಗಣಪತಿ ಬರಗದ್ದೆ, ನಾರಾಯಣ ಗೌಡ ಗೇರಾಳ, ದಾಮೋದರ ಗೌಡ ಹೆಬ್ಬಾಳ, ಹರಿ ಗೌಡ ಕುಂಬ್ರಿ ಅವರ ಒಡನಾಟ, ಸಹಕಾರವನ್ನು ಗುಣವಂತ ಗೌಡ ಅವರು ಸದಾ ಸ್ಮರಿಸುತ್ತಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಮುನ್ನಡೆಯಲು ಉತ್ಸಾಹಿಗಳಾದ ಅವರ ಕಲಾ ಸಾಧನೆಯ ಕನಸಿಗೆ ವಿಘ್ನವೆಂಬoತೆ 45ನೇ ವಯಸ್ಸಿಗೆ ಪಾರ್ಶ್ವವಾಯು ಕಾಯಿಲೆಗೆ ಒಳಗಾದರು. ಪರಿಣಾಮವಾಗಿ ಒಂದು ಕೈ – ಒಂದು ಕಾಲು ಶಕ್ತಿಯನ್ನು ಕಳೆದುಕೊಂಡಿತು. ಇದೀಗ ಅವರಿಗೆ ಸ್ಪಷ್ಟವಾಗಿ ಮಾತನಾಡಲೂ ಸಾಧ್ಯವಾಗುವುದಿಲ್ಲ. ಆದರೂ ತಮ್ಮೂರಿನಲ್ಲಿ ನಡೆಯುವ ಯಕ್ಷಗಾನದಲ್ಲಿ ತಾನು ಒಂದು ಪಾತ್ರವನ್ನು ಮಾಡುತ್ತೇನೆ ಎಂದು ಉತ್ಸಾಹ ತೋರುತ್ತಾರೆ. ಇಂತಹ ಸ್ಥಿತಿಯಲ್ಲಿಯೂ ಅವರಲ್ಲಿ ಯಕ್ಷಗಾನದ ಬಗೆಗಿನ ಆಸಕ್ತಿ, ಹುಮ್ಮಸ್ಸು ಕೊಂಚವೂ ಕಡಿಮೆಯಾಗಿಲ್ಲ. ಅವರ ಕಲಾಸೇವೆಯನ್ನು ಗುರುತಿಸಿ ಶ್ರೀ ವೀರಾಂಜನೇಯ ಹವ್ಯಾಸಿ ಯಕ್ಷ ಕಲಾ ಬಳಗ ಕರ್ಕಿನಬೈಲ್ ಸನ್ಮಾನಿಸಿ ಗೌರವಿಸಿದೆ.
ಪ್ರಸ್ತುತವಾಗಿ ಕರ್ಕಿನಬೈಲ್, ಗೇರಾಳ, ಬಾಳೆಕೊಡ್ಲು ಸೇರಿದಂತೆ ಬಿಸಗೋಡ ಭಾಗದವರಿಗೆ ಅವರು ಯಕ್ಷ ಮಾರ್ಗದರ್ಶಿಯಾಗಿದ್ದಾರೆ.
– ಕರ್ನಾಟಕ ಕಲಾ ಸನ್ನಿಧಿ
Discussion about this post