ಆಧುನಿಕ ಯಾಂತ್ರಿಕ ಜೀವಿಗಳ ಜೊತೆಯಾಗಿ ಅನಿವಾರ್ಯತೆಯಿಂದ ಅನಿರ್ದಿಷ್ಟ ಅರೆಬದುಕನ್ನು ಅರೆಮನಸ್ಸಿನಿಂದ ಸಾಗುತ್ತಿರುವ ನಮಗೆ ನಮ್ಮ ಪೂರ್ವ ಜನ ಜೀವನ ಶೈಲಿಯ ಕುರಿತಾದ ಕುತೂಹಲ ಸಾಮಾನ್ಯ! ಹಾಗೆ ಹೋಲಿಸಿದರೆ ಕಾನೂರು ಹೆಗ್ಗಡಿತಿಯ ( Book) ಕಾಲಕ್ಕೆ ನಾವು `ಅಪೂರ್ವಜರು’!
ಅಪೂರ್ವಜರಲ್ಲಿ ಒಬ್ಬನಾದ ನನಗೆ ಪೂರ್ವಜನನ್ನಾಗಿಸಿ ಕಾನೂರಿನ ನೀರವತೆಯಲ್ಲಿಯೂ-ನರವಿಘ್ನತೆಯಲ್ಲಿಯೂ, ರುದ್ರತೆಯಲ್ಲಿಯೂ-ರಮಣೀಯತೆಯಲ್ಲಿಯೂ ಅಸ್ತಿತ್ವ ಕಲ್ಪಿಸಿದ ಕಾದಂಬರಿಕರ್ತನಿಗೆ ಕೋಟಿ ನಮನಗಳು! `ಮಲೆನಾಡು’ -ಅದೊಂದು ಅನಂತ ವಿಸ್ಮಯಗಳ ಅಕ್ಷಯಪಾತ್ರೆ…… ನಡೆದಷ್ಟು ನಿಗೂಢ: ಬಗೆದಷ್ಟು ಸಂಕೀರ್ಣ…. ಅಲ್ಲಿನ ಅನುಭವ ಅವ್ಯಕ್ತವಾದರೂ, ಸ್ವಪ್ರಯತ್ನದಿಂದ ವ್ಯಕ್ತಪಡಿಸುವ ಶಕ್ತರೂ ಇದ್ದಾರೆ. ಶಕ್ತರ ಕಿರುಪಟ್ಟಿಯಲ್ಲಿ ರಸಋಷಿಯ ಭಾವಭಿವ್ಯಕ್ತಿ ಶ್ರೇಷ್ಠವಾದುದು.. ಆಕರ್ಷಣೀಯವಾದುದು!!
ಕುವೆಂಪುರವರು ಮಲೆನಾಡ ಬದುಕಿನ ಕಡಲ ಒಂದು ಹನಿಯನ್ನು ಕಾದಂಬರಿ ಮೂಲಕ ಪ್ರಸ್ತುತಪಡಿಸಿದ್ದಾರೆ. ಕಾನೂರ ಮನೆತನ-ಕಾನನದ ಒಡೆತನದ ಕುರಿತಾದ ಕಥಾನಕವನ್ನು ಮುತ್ತುಮಲ್ಲಿಗೆ ಪೋಣಿಸಿದ ರೀತಿಯಲ್ಲಿ ಸತ್ವಯುತಗೊಳಿಸಿದ್ದಾರೆ. (ಸುಮವೋ ಶ್ವೇತ;ಘಮವೋ ಸಮ್ಮೋಹಿತ)
ಕಾದಂಬರಿಯ ಸಾರಾಂಶ ಹೇಳಬೇಕೆಂದರೆ ಅದು ನನ್ನ ಮಟ್ಟಿಗೆ ಅಸಾಧ್ಯವಾದ ಮಾತು -ಅದು ಕರಿಯ ಬಿಂಬವನ್ನು ಕನ್ನಡಿಯಲ್ಲಿ ಹಿಡಿದಂತೆ! ದೂರದಿಂದ ಕರಿ ಕಾಣಲೂಬಹುದು ಆದರೆ ಅದರ ಗುಣಾವಗುಣಗಳನ್ನು ಸನಿಹದಿಂದ ತಿಳಿಯಬೇಕಾಗುತ್ತದೆ. ಸನಿಹ ತೆರಳಿದರೆ ನಮ್ಮ ಮತಿಯೆಂಬ ದರ್ಪಣವು ಕಿರಿದಾಗುತ್ತದೆ ಮತ್ತು ತನಗೆ ಕಂಡ ಅದ್ಯಾವುದೋ ಒಂದು ಭಾಗದ ವಿವರಣೆಯನ್ನು ಮಾತ್ರ ನೀಡುತ್ತದೆ. ಹಾಗಾಗಿ ದರ್ಪಣವಾಗಿ ದೂರದರ್ಶಕವಾಗಿದ್ದೇನೆ.
ಕಾನೂರಿನ ನನ್ನ ಕೃತಕ ಬದುಕನ್ನು ನಿರಾಯಾಸದಿಂದಲೂ, ನವೋಲ್ಲಾಸದಿಂದಲೂ ಪೂರೈಸಿದ ಸಂತೃಪ್ತಿ ನನಗಿದೆ; ಮುಕ್ತಿ ಇಲ್ಲವಷ್ಟೆ??!!!!??
ಪುರವಣಿ ಬದುಕಿನ ಆಕಾಂಕ್ಷಿಗಳು ವಾಚಿಸಿ (ಜೀವಿಸಿ).
– ದಿನೇಶ ಗೌಡ
.
Discussion about this post