ಹೇಳಿ ಕೇಳಿ ನಮ್ಮದು ಹಳ್ಳ -ಕೊಳ್ಳ, ಗದ್ದೆ -ತೋಟ, ಗುಡ್ಡಗಳಿಂದ ಕೂಡಿದ ಉತ್ತರಕನ್ನಡ ( Uttara kannada ) ಜಿಲ್ಲೆ! ಮೊದಲೆಲ್ಲ ಇಲ್ಲಿ ಹೇಗಿತ್ತು ಎಂದರೆ… ಊರಲ್ಲಿರುವ ಇನ್ನೊಂದು ಮನೆಗೋ ಅಥವಾ ಮನೆಯಿಂದ ದೂರವಿರುವ ತೋಟಕ್ಕೋ ಹೋಗಬೇಕಾದರೆ ಚಿಕ್ಕದಾದ ಆದರೆ ತೀರಾ ಹತ್ತಿರದ ( Foot way ) ಕಾಲು ದಾರಿಗಳಿರುತ್ತಿದ್ದವು.
ಅದು ಇನ್ಯಾರದ್ದೋ ತೋಟಗಳ ಒಳಗಿಂದ, ಮತ್ಯಾರದ್ದೋ ಬೇಣದಿಂದ, ಒಂದೆರಡು ಕಾಲು ಸಂಕ ಅಥವಾ ಬೇಲಿಗಳನ್ನೋ ದಾಟಿಸಿ ಶೀಘ್ರ ಗಮ್ಯ ತಲುಪಿಸುವ ಬೈತಲೆಯಂತ (Foot way) ಪುಟ್ಟ ದಾರಿ! ಆದರೆ ಇಂದು ಧಾವಂತಕ್ಕೆ ಸಿಕ್ಕ ಬದುಕಿನಲ್ಲಿ, ಕಾಲ್ನಡಿಗೆಯಲ್ಲಿ ಓಡಾಡುವವರು ಕಡಿಮೆಯಾಗಿದ್ದಾರೆ. ಮಾರು ದೂರಕ್ಕೂ ಬೈಕು ಕಾರು ಏರುವಂತಾಗಿದೆ! ಮೊದಲಿದ್ದ ಕಾಲುದಾರಿಗಳು ಜೆಸಿಬಿಯ ದಾಳಿಗೆ ಸಿಕ್ಕಿ ಹೆದ್ದಾರಿಗಳಂತಾಗಿವೆ! ಒಟ್ಟಾರೆ, ಕಾಲದ ವೇಗಕ್ಕೆ ಸ್ಪರ್ಧಿಸಲಾಗದೆ ಕಾಲು ದಾರಿಗಳು ಕಣ್ಮರೆಯಾಗಿವೆ!
ರಾಘವೇಂದ್ರ ಶಿರವಳ್ಳಿ, ಯಲ್ಲಾಪುರ