ಜೀವನದಲ್ಲಿ ಒಮ್ಮೆಯಾದರೂ ಮುಖ್ಯಮಂತ್ರಿ ಆಗಬೇಕು ಎಂಬುದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರ ಕನಸು. ಈ ಕನಸಿಗೆ ಸದಾ ಮಣ್ಣೆರಚುತ್ತಿರುವುದು ಅವರು ನಂಬಿರುವ ಅದೇ ಕಾಂಗ್ರೆಸ್ ಪಕ್ಷ!
ಆರ್ ವಿ ದೇಶಪಾಂಡೆ ಶಾಸಕರಾಗಿ ಆಯ್ಕೆ ಆಗುವುದನ್ನು ಸಹ ಕಾಂಗ್ರೆಸ್ ಪಕ್ಷದ ಅನೇಕರು ಸಹಿಸಲ್ಲ. ಹಿರಿಯರು ಹಾಗೂ ರಾಜಕೀಯ ಮುತ್ಸದ್ದಿಯಾದ ಅವರು ಶಾಸಕರಾದರೆ ಸಚಿವ ಸ್ಥಾನ ಕೊಡಬೇಕಾಗುತ್ತದೆ. ಆರ್ ವಿ ದೇಶಪಾಂಡೆ ಕೇವಲ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಸಹ ಅವರು ಪ್ರತಿಸ್ಪರ್ಧಿ ಎಂಬುದು ಸಿದ್ದರಾಮಯ್ಯರಿಗೆ ಸಹ ತಿಳಿದ ವಿಷಯ. ಹೀಗಾಗಿ ಸ್ವಪಕ್ಷದ ಆರ್ ವಿ ದೇಶಪಾಂಡೆಯವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಅನೇಕ ಬಾರಿ ಸಾಕಷ್ಟು ಸಲ ಪ್ರಯತ್ನಿಸಿದ್ದಾರೆ. ಕ್ಷೇತ್ರದ ಜನ ಆರ್ ವಿ ದೇಶಪಾಂಡೆ ಅವರನ್ನು ಬಿಟ್ಟುಕೊಟ್ಟಿಲ್ಲ. ಹಳಿಯಾಳ ಭಾಗದಲ್ಲಿ ಸಿದ್ದರಾಮಯ್ಯ ಸೇರಿ ಬೇರೆ ಕಾಂಗ್ರೆಸ್ ನಾಯಕರ ಪ್ರಭಾವ ಕೆಲಸ ಮಾಡಿಲ್ಲ!
ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನ್ಯಾಯಯುತವಾಗಿ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ದೊರೆಯಬೇಕಿತ್ತು. ಮೂರು ದಶಕಗಳ ಕಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಡಿತ ಸಾಧಿಸಿ ಆಡಳಿತ ನಡೆಸಿದ ಅವರನ್ನು ಕಾಂಗ್ರೆಸ್ ಸಂಪೂರ್ಣವಾಗಿ ಮೂಲೆಗುಂಪು ಮಾಡಿತು. ಸಚಿವ ಸ್ಥಾನ ನೀಡದೇ ಇದ್ದರೂ ಯಾವುದಾದರೂ ಉನ್ನತ ನಿಗಮ ಮಂಡಳಿ ಸ್ಥಾನವನ್ನಾದರೂ ಕೊಡಬೇಕಿತ್ತು. ಆದರೆ, ಅದಕ್ಕೂ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕಿ ಆರ್ ವಿ ದೇಶಪಾಂಡೆಯವರನ್ನು ನಿರ್ಲಕ್ಷಿಸಿದ್ದಾರೆ. ಆರ್ ವಿ ದೇಶಪಾಂಡೆ ಅವರಿಗೆ ದೊರೆಯಬೇಕಿದ್ದ ಸಚಿವ ಸ್ಥಾನವನ್ನು ತಪ್ಪಿಸಿದ್ದು ಯಾರು? ಎಂಬುದು ಗುಟ್ಟಾಗಿ ಉಳಿದಿಲ್ಲ!
ಈ ಎಲ್ಲಾ ಹಿನ್ನಲೆ ಅರಿತ ಆರ್ ವಿ ದೇಶಪಾಂಡೆ ಇದೀಗ ಸೀಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರಕ್ಕೆ ತೆರಳಿ ತಮ್ಮ ಮನದಾಸೆ ಬಿಚ್ಚಿಟ್ಟಿದ್ದಾರೆ. ಈ ಹಿಂದೆ ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಯಲ್ಲಾಪುರದಲ್ಲಿ ಪ್ರತಿಕ್ರಿಯಿಸಿದ್ದ ಅವರು `ಕೆಲವೊಮ್ಮೆ ರೈಲು ಮಿಸ್ ಆಗುತ್ತದೆ. ಏನು ಮಾಡಲಾಗುವುದಿಲ್ಲ’ ಎಂದಿದ್ದರು. ಜೊತೆಗೆ `ಸಚಿವ ಸ್ಥಾನ ತಪ್ಪಿದರೆ ಏನಂತೆ, ಮುಖ್ಯಮಂತ್ರಿ ಆಗುವ ಅವಕಾಶ ಸಿಗಬಹುದು’ ಎನ್ನುವ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಅದೇ ಮಾತನ್ನು ಇದೀಗ ಸಿದ್ದರಾಮಯ್ಯ ಅವರ ಕ್ಷೇತ್ರವಾದ ಮೈಸೂರಿನಲ್ಲಿ ಪುನರುಚ್ಚರಿಸಿದ್ದಾರೆ.
`ನಾನು ಸಚಿವನಾಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ’ ಎಂದು ಆರ್ ವಿ ದೇಶಪಾಂಡೆ ಹೇಳಿದ್ದಾರೆ. `ನಾನು ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ದೊಡ್ಡವನು. ಆದರೂ ಸಿದ್ದರಾಮಯ್ಯ ಅವಕಾಶ ಕೊಟ್ಟರೆ ನಾನೇ ಮುಂದಿನ ಮುಖ್ಯಮಂತ್ರಿ’ ಎಂದವರು ಹೇಳಿದ್ದಾರೆ.