ಯಕ್ಷಗಾನ ಭಾಗವತರಾದ ತಂದೆ – ಸಾಂಪ್ರದಾಯಿಕ ಹಾಡುಗಾರ್ತಿ ತಾಯಿ ಅವರಿಂದ ಬಲೆಗುಳಿಯ ಭಾಸ್ಕರ ಭಟ್ಟರಿಗೆ ಸಾಂಸ್ಕೃತಿಕ ಜಗತ್ತು ಪರಿಚಯವಾಯಿತು. ತಮ್ಮಲ್ಲಿನ ಪ್ರತಿಭೆಯನ್ನು ಬಳಸಿಕೊಂಡು ಅವರು ಕಲಾ ಆರಾಧನೆಯಲ್ಲಿ ತೊಡಗಿದರು. ವೃತ್ತಿಪರ ಕಲಾವಿದರಾಗಿ ಬೆಳೆಯಲು ಆಗದೇ ಇದ್ದರೂ ಹವ್ಯಾಸಿ ಕಲಾವಿದರಾಗಿ ಹೆಸರು ಮಾಡಿದರು.
ಬಲಿಗುಳಿಯ ನಾರಾಯಣ ಸುಬ್ರಾಯ ಭಟ್ಟ ಅವರು ಯಕ್ಷಗಾನ ಭಾಗವತರಾಗಿದ್ದರು. ಅವರ ಪತ್ನಿ ಗಾಯತ್ರಿ ಭಟ್ಟ ಅವರು ಸುಂದರವಾಗಿ ಹಾಡುತ್ತಿದ್ದರು. ಈ ಇಬ್ಬರ ಪುತ್ರರಾದ ಭಾಸ್ಕರ ಭಟ್ಟ ಅವರು ಬರಗದ್ದೆ ಶಾಲೆಯಲ್ಲಿ 3ನೇ ತರಗತಿಯವರೆಗೆ ಓದಿ ನಂತರ ಉತ್ತಮ ಕೃಷಿಕರಾದರು. ಜೊತೆಗೆ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ತಂದೆ-ತಾಯಿ ಅವರ ಪಾಲಿಗೆ ಮೊದಲ ಗುರು. ಅವರಿಂದಲೇ ಯಕ್ಷಗಾನದ ಕಡೆ ಆಸಕ್ತಿ ಮೂಡಿತು.
ಭಾಗವತಿಕೆಯ ಕಲಿಯುವ ಹಂಬಲದಿoದ 1978-79ನೇ ಸಾಲಿನಲ್ಲಿ ಕೋಟದಲ್ಲಿದ್ದ ಹಂಗಾರಕಟ್ಟೆ ಕಲಾ ಕೇಂದ್ರ ಭಾಸ್ಕರ ಭಟ್ಟರು ಸೇರಿದರು. ಅಲ್ಲಿ ನಾರಣಪ್ಪ ಉಪ್ಪೂರರಲ್ಲಿ ಎರಡು ವರ್ಷ ಭಾಗವತಿಕೆಯ ಅಭ್ಯಾಸ ಮಾಡಿದರು. ಆ ಅವಧಿಯಲ್ಲಿ ಉಪ್ಪೂರರು ತಾವು ಪ್ರಧಾನ ಭಾಗವತರಾಗಿದ್ದ ಅಮೃತೇಶ್ವರಿ ಮೇಳದ ಆಟಗಳಿಗೆ ಆಗಾಗ ಶಿಷ್ಯರನ್ನು ಕರೆದೊಯ್ಯುತ್ತಿದ್ದರು. ಅಲ್ಲಿ ಶಿಷ್ಯರಿಗೆ ಪದ್ಯ ಹೇಳಲು ಅವಕಾಶ ಮಾಡಿಕೊಡುತ್ತಿದ್ದರು. ತರಗತಿಯ ಕಲಿಕೆಯ ಜೊತೆಗೆ ಮೇಳದಲ್ಲಿ ಪ್ರಾಯೋಗಿಕ ಕಲಿಕೆಗೂ ಅವಕಾಶ ಸಿಕ್ಕಿತು.
`ನಮ್ಮ ಪಾಲಿಗೆ ಉಪ್ಪೂರರು ಕೇವಲ ಯಕ್ಷಗಾನದ ಗುರುಗಳಲ್ಲ. ಆದರ್ಶ ಬದುಕಿಗೆ ಅಡಿಪಾಯ ಹಾಕಿಕೊಟ್ಟ ಮಹಾನ್ ವ್ಯಕ್ತಿ. ದೇವರೇ ಗುರುವಿನ ರೂಪದಲ್ಲಿ ಬಂದಿರುವ ಭಾವನೆ ನಮ್ಮಲ್ಲಿದೆ’ ಎಂದು ಭಾಸ್ಕರ ಭಟ್ಟರು ನೆನೆಯುತ್ತಾರೆ. ಅವರ ಮಾರ್ಗದರ್ಶನದಿಂದ ನೈತಿಕತೆಯ ವಿಷಯದಲ್ಲಿ ಯಾವ ರಾಜಿ ಇಲ್ಲದೇ ಸಾತ್ವಿಕ ಬದುಕು ಸಾಗಿಸುತ್ತಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು. ಇನ್ನೂ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಕೆ.ಪಿ.ಹೆಗಡೆ ಮೊದಲಾದವರು ಈ ಕೇಂದ್ರದಲ್ಲಿ ಭಾಸ್ಕರ ಭಟ್ಟರ ಜೊತೆಗಾರರಾಗಿದ್ದರು. ಭಾಸ್ಕರ ಭಟ್ಟರ ಪಾಲಿಗೆ ಅವರ ಸ್ನೇಹ ಸದಾ ಸ್ಮರಣೀಯ.
ಎರಡು ವರ್ಷಗಳ ಕಾಲ ಕೇಂದ್ರದಲ್ಲಿ ಅಭ್ಯಾಸ ಮಾಡಿದ ಅವರು ಮೇಳದ ತಿರುಗಾಟಕ್ಕೆ ಸಜ್ಜಾಗಿದ್ದರು. ಆದರೆ, ಮನೆಯಲ್ಲಿ ಭಾಸ್ಕರ ಭಟ್ಟರ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಮನೆಗೆ ಮರಳಿ ಕೃಷಿ ಜೀವನ ಅವರಿಗೆ ಅನಿವಾರ್ಯವಾಯಿತು. ಆದರೂ, ಕಲೆಯ ಮೇಲಿನ ಸೆಳೆತ ದೂರವಾಗಲಿಲ್ಲ. ಸ್ಥಳೀಯವಾಗಿ ಯಕ್ಷಗಾನ, ತಾಳಮದ್ದಲೆಗಳಲ್ಲಿ ಭಾಗವತರಾಗಿ ಭಾಗವಹಿಸಿದರು. ತನ್ನ ವಿದ್ಯೆಯನ್ನು ಆಸಕ್ತರಿಗೆ ಧಾರೆ ಎರೆದು ಯಕ್ಷಗುರುವಾದರು. ಬಿಸಗೋಡ, ಆನಗೋಡ, ಚವತ್ತಿ, ಹೆಗ್ಗೋಡು ಮುಂತಾದೆಡೆ ತರಗತಿಗಳನ್ನು ನಡೆಸಿದರು. ಅವರ ಅಧೀನದಲ್ಲಿ 60ಕ್ಕೂ ಅಧಿಕ ಮಂದಿ ಯಕ್ಷಗಾನ ಕಲಿತಿದ್ದಾರೆ.
`ಅಣಲಗಾರ ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ಅವರು ಬರೆದಿದ್ದಾರೆ. 38 ವರ್ಷಗಳ ಕಾಲ ಕಲಾ ಸೇವೆ ನಡೆಸಿದ ಭಾಸ್ಕರ ಭಟ್ಟ 8 ವರ್ಷದ ಹಿಂದೆ ಅನಾರೋಗ್ಯದ ಕಾರಣ ನಿವೃತ್ತಿ ಪಡೆದರು. ಆನಗೋಡ ಯಕ್ಷಗಾನ ಹಾಗೂ ಕಲಾ ಮಿತ್ರ ಮಂಡಳಿ ಟ್ರಸ್ಟಿನ ದಶಮಾನೋತ್ಸವದ ಸಂದರ್ಭದಲ್ಲಿ ಮೇರು ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಂದ ಸನ್ಮಾನ ಸ್ವೀಕರಿಸಿದ ಕ್ಷಣವನ್ನು ಅವರು ಸದಾ ಸ್ಮರಿಸುತ್ತಾರೆ.
ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ