ದಕ್ಷಿಣ ಭಾರತದ ಹೆಚ್ಚಿನ ಅಡುಗೆ ಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು.
ಬೇಕರಿ ತಿನಿಸುಗಳ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ ಅಮ್ಮ ಒಂದಿಷ್ಟು ಕಾಯಿ ತುರಿಗೆ ಬೆಲ್ಲ ಬೆರೆಸಿ ಸಿಹಿ ಅವಲಕ್ಕಿ ಅಥವಾ ಉಪ್ಪು-ಖಾರ-ಒಗ್ಗರಣೆ ಬೆರೆಸಿದ ಖಾರದ ಅವಲಕ್ಕಿ ಬೆರೆಸಿ ಕೊಡುತ್ತಿದ್ದರು. ಅದ್ಬುತವಾದ ರುಚಿಯುಳ್ಳ ತಾಜಾ ತಿನಿಸು ಕೆಲವೇ ನಿಮಿಷದಲ್ಲಿ ಸಿದ್ಧವಾಗುತ್ತಿತ್ತು. ತೆಂಗಿನಕಾಯಿಯ ಎಳನೀರು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಎಳೆಯ ಮಕ್ಕಳಿಗೂ, ಅಶಕ್ತರಿಗೂ ಉತ್ತಮ ಆಹಾರ.
ಬೆಳೆದ ಕಾಯಿಯು ಅಡುಗೆಗೆ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬ – ಹರಿದಿನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಏಷ್ಯಾದ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆಗೆ ತೆಂಗಿನಕಾಯಿ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಏಷ್ಯಾ-ಫೆಸಿಫಿಕ್ ದೇಶಗಳ ತೆಂಗಿನಕಾಯಿ ಸಮುದಾಯ ಮಂಡಳಿಯನ್ನು ರಚಿಸಲಾಗಿದೆ. ಸೆಪ್ಟೆಂಬರ್ 2ರಂದು `ವಿಶ್ವ ತೆಂಗಿನಕಾಯಿ ದಿನ’ ಎಂದು ಸಹ ಘೋಷಿಸಿದ್ದಾರೆ.
ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಎಳನೀರಿನ ಪ್ರಯೋಜನಗಳು ಇಷ್ಟು:
* ದೇಹವನ್ನು ತಂಪಾಗಿ ಇಡುತ್ತದೆ
* ಮೂತ್ರಕೋಶವನ್ನು ಶುದ್ಧಗೊಳಿಸುತ್ತದೆ
* ಮೂತ್ರ ವರ್ಧಕವೂ ಹೌದು
* ದೇಹದ ಶಕ್ತಿಯನ್ನು ವರ್ಧಿಸುತ್ತದೆ
* ಹಸಿವನ್ನು ಹೆಚ್ಚಿಸುತ್ತದೆ
* ಉರಿ ಮೂತ್ರವನ್ನು ತಡೆಯುತ್ತದೆ
* ಹೃದಯಕ್ಕೆ ಒಳ್ಳೆಯದು
* ದಣಿವನ್ನು ನಿವಾರಿಸುತ್ತದೆ
* ದೇಹದ ತೇವಾಂಶವನ್ನು ಕಾಪಾಡುತ್ತದೆ.
* ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ.
ಕಲ್ಪವೃಕ್ಷದ ಮಹತ್ವ ಅರಿಯಿರಿ… ಬೇರೆಯವರಿಗೂ ತಿಳಿಸಿ.. ಇಂದೇ ನಿಮ್ಮ ಮನೆಯಂಗಳದ ಮೂಲೆಯಲ್ಲಿ ತೆಂಗಿನ ಗಿಡ ನೆಡಿ!
ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು ಶಿರಸಿ