`ರಾಜ್ಯ ಸರ್ಕಾರ ಬಡವರ ಏಳಿಗೆಗಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಆರ್ಥಿಕವಾಗಿ ಮೇಲ್ವರ್ಗದಲ್ಲಿದ್ದವರು ಇದನ್ನು ಪಡೆಯಬಾರದು’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಮೇಲ್ವರ್ಗದವರು ಇದನ್ನು ಸ್ವಯಂ ಪ್ರೇರಣೆಯಿಂದ ಬಿಡಬೇಕು’ ಎಂಬುದು ಅವರ ವಾದ!
`ಬೆಲೆ ಏರಿಕೆಯಿಂದ ಕಂಗೆಟ್ಟಿದ ರಾಜ್ಯದ ಜನತೆಗೆ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣಗೊಳ್ಳಲು ನೆರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳ ಒಳಗೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ ಕೆಲವಡೆಗಳಲ್ಲಿ ಆರ್ಥಿಕ ಬಲಾಡ್ಯರು ಕೂಡಾ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಅವರು ಈ ಯೋಜನೆಗಳ ಪ್ರಯೋಜನ ಪಡೆಯುವುದನ್ನು ಸ್ವಯಂ ಪ್ರೇರಣೆಯಿಂದ ನಿಲ್ಲಿಸಬೇಕು’ ಎಂದವರು ಹೇಳಿದ್ದಾರೆ.
`ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯದೇ ವಂಚಿತರಾದ ಅರ್ಹ ಜನತೆಯನ್ನು ಗುರುತಿಸಿ, ಅವರಿಗೆ ಯೋಜನೆಗಳ ಸಂಪೂರ್ಣ ಪ್ರಯೋಜನ ದೊರಕಿಸುವುದು ಅನುಷ್ಠಾನ ಪ್ರಾಧಿಕಾರದ ಸಮಿತಿಯ ಕರ್ತವ್ಯವಾಗಿದೆ’ ಎಂದವರು ತಿಳಿಸಿದರು. ಶಾಸಕ ಸತೀಶ್ ಸೈಲ್ ಸಹ ಇದಕ್ಕೆ ಧ್ವನಿಗೂಡಿಸಿದ್ದು, `ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇಲ್ಲದವರು ತಮಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಬಿಟ್ಟುಕೊಡಬೇಕು. ಯೋಜನೆಯ ಪ್ರಯೋಜನ ಬಡ ಜನತೆಗೆ ಮಾತ್ರ ದೊರೆಯಬೇಕು’ ಎಂದಿದ್ದಾರೆ.