ಶಿರಸಿ: `ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಅತಿಕ್ರಮಣ ತೆರವು ಮಾಡಬೇಕು’ ಎಂದು ಆದೇಶಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಇದೀಗ ಕೆಲ ವಿನಾಯತಿಗಳನ್ನು ನೀಡಿ ಟಿಪ್ಪಣಿ ಹೊರಡಿಸಿದ್ದಾರೆ. ಪ್ರಸ್ತುತ `ಅರಣ್ಯ ಒತ್ತುವರಿಯಲ್ಲಿರುವ ರೆಸಾರ್ಟಗಳನ್ನು ಕೂಡಲೇ ತೆರವು ಮಾಡಬೇಕು’ ಎಂದವರು ಸೂಚಿಸಿದ್ದಾರೆ. ಜೊತೆಗೆ `ಅನಾಧಿಕಾಲದಲ್ಲಿ 3 ಎಕರೆಗಿಂತ ಕಡಿಮೆ ಪ್ರದೇಶವನ್ನು ಅತಿಕ್ರಮಣ ಮಾಡಿದವರ ತಂಟೆಗೆ ಹೋಗಬೇಡಿ’ ಎಂದು ಅವರು ಹೇಳಿದ್ದಾರೆ.

`ರಾಜ್ಯದಲ್ಲಿ 3ರಿಂದ 30 ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನು ಮೊದಲು ಒಕ್ಕಲೆಬ್ಬಿಸಬೇಕು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದು ಬೇಡ’ ಎಂದವರು ಟಿಪ್ಪಣಿ ಮೂಲಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ. `27 ಏಪ್ರೀಲ್ 1978ರ ಪೂರ್ವ ಮಂಜೂರಿಯ ಅರ್ಹ ಹಾಗೂ ಬಿಟ್ಟುಹೋಗಿರುವ ಪ್ರಕರಣ ಅಲ್ಲದೇ, ಅರಣ್ಯ ಒತ್ತುವರಿ ಮತ್ತು ಒತ್ತುವರಿದಾರನ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಒತ್ತುದಾರರನ್ನು, ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ತಾತ್ಕಾಲಿಕ ವಿನಾಯತಿ ಸಿಗಲಿದೆ.
ಸುಪ್ರೀಂ ಕೋರ್ಟ ಆದೇಶದ ಅನ್ವಯ ಪುನರ್ ಪರೀಶೀಲನೆಗೆ ಬಾಕಿ ಇಲ್ಲದ ಪ್ರಕರಣಗಳನ್ನು ಖಾತ್ರಿಪಡಿಸಿಕೊಂಡು ಹಾಗೂ ಕರ್ನಾಟಕ ಅರಣ್ಯ ಕಾಯಿದೆ ಕಲಂ 64 ಎ ಪ್ರಕ್ರಿಯೆ ಅಡಿಯಲ್ಲಿ ಪ್ರಕ್ರಿಯೆ ಜರುಗಿಸಿ ಒತ್ತುವರಿಯನ್ನು ಜರುಗಿಸುವ ಕುರಿತು ಆದೇಶದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ದಾಖಲೆಗಳ ಜೊತೆ ವಿವರಿಸಿದರು. ಅರಣ್ಯ ಅತಿಕ್ರಮಣ ವಿಷಯದಲ್ಲಿ ಅರಣ್ಯ ಸಚಿವರು ಹೊರಡಿಸಿದ ಆದೇಶದ ವಿರುದ್ಧ ನ್ಯಾಯವಾದಿ ರವೀಂದ್ರ ನಾಯ್ಕ ಹೋರಾಟ ನಡೆಸಿದ್ದರು. ಬೆಂಗಳೂರಿಗೆ ತೆರಳಿ ಅರಣ್ಯ ಸಚಿವರ ಜೊತೆ ಇನ್ನಿತರ ಸಚಿವರನ್ನು ಮಾತನಾಡಿಸಿ ಕಾನೂನಿನ ಪಾಠ ಮಾಡಿದ್ದರು. ಪ್ರಸ್ತುತ ತಜ್ಞರ ಸಲಹೆ ಪಡೆದ ಸಚಿವರು ಹಳೆಯ ಆದೇಶವನ್ನು ಮಾರ್ಪಾಡು ಮಾಡಿ ಟಿಪ್ಪಣಿ ಹೊರಡಿಸಿದ್ದಾರೆ. ಸೆಪ್ಟಂಬರ್ 2ರಂದು ಈ ಟಿಪ್ಪಣಿ ಹೊರಡಿಸಿದ್ದಾರೆ.




