ಅದು ಯಾರು ಮಾಡಿದ ಪಾಪದ ಫಲವೋ ಗೊತ್ತಿಲ್ಲ. ಅನಾಥವಾಗಿದ್ದು ಮಾತ್ರ ನವಜಾತ ಶಿಶು!
ಎರಡು ತಾಸಿನ ಹಿಂದೆ ಜನಿಸಿದ ಮಗುವನ್ನು ದುಷ್ಕರ್ಮಿಗಳು ಕಾರವಾರದಲ್ಲಿ ಪೊದೆ ಹಿಂದೆ ಎಸೆದಿದ್ದಾರೆ. ಕಾಜುಭಾಗದಿಂದ ಕೂರ್ಸೆವಾಡಕ್ಕೆ ತೆರಳುವ ದಾರಿ ಅಂಚಿನ ಪ್ರದೇಶದ ವಿಜಯವಾಡ ಎಂಬ ಪ್ರದೇಶದಲ್ಲಿ ಸಾಕಷ್ಟು ಪೊದೆಗಳು ಬೆಳೆದಿದ್ದು, ಮಳೆ ನೀರಿನಿಂದ ರಾಡಿಯಾದ ಮಣ್ಣಿನಲ್ಲಿ ಮಗುವನ್ನು ಎಸೆದಿದ್ದಾರೆ. ಮುಳ್ಳಿನ ನಡುವೆ ಮಲಗಿದ್ದ ಮಗುವನ್ನು ನೋಡಿದವರು ಅದನ್ನು ರಕ್ಷಿಸಿದ್ದಾರೆ.
ಇಲ್ಲಿನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಿಂದೆ ಮಗು ಅಳುವ ಸದ್ದು ಕೇಳಿಸಿದ್ದು, ಸ್ಥಳೀಯರು ಹುಡುಕಾಟ ನಡೆಸಿದರು. ಆಗ ಅಲ್ಲಿ ಎರಡು ತಾಸಿನ ಹಿಂದೆ ಜನಿಸಿದ ಮಗು ಕಾಣಿಸಿದೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ನೆರವು ಯಾಚಿಸಿ ಮಗುವಿನ ಜೀವ ಕಾಪಾಡಲಾಗಿದೆ. ಸರಾಯಿ ಕುಡಿದು ಬಿಸಾಡಿದ ಬಾಟಲಿಗಳ ಪಕ್ಕ ನವಜಾತ ಶಿಶು ಒದ್ದಾಡುತ್ತಿರುವುದನ್ನು ನೋಡಿ ಜನ ಮರುಕ ವ್ಯಕ್ತಪಡಿಸಿದರು. ಇದೀಗ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ತುರ್ತು ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗಮನಿಸಿ, ಮಗು ಎಸೆದವರನ್ನು ಹುಡುಕುವ ಕೆಲಸ ನಡೆಯುತ್ತಿದೆ.