ಶಿರಸಿ: `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರ್ಜಿದಾರರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕು. ಆ ಅತಿಕ್ರಮಣ ಪ್ರದೇಶದಲ್ಲಿ ಕಾಡು ಬೆಳಸಬೇಕು’ ಎಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿವೆ.
ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ `ಅರಣ್ಯವಾಸಿಗಳ ಪರವಾಗಿ ಈ ಹಿಂದೆ ಪ್ರಕಟಿಸಿದ ನಿಲುವುನೊಂದಿಗೆ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸಬೇಕು’ ಎಂದು ಅರಣ್ಯ ಅತಿಕ್ರಮಣ ಹೋರಾಟಗಾರರೂ ಆಗಿರುವ ನ್ಯಾಯವಾದಿ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. ಬುಧವಾರ ಬೆಳಗ್ಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರನ್ನು ಭೇಟಿಯಾದ ಅವರು `ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ 2008ರಿಂದ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಲು ಇದು ಯೋಗ್ಯ ಸಮಯ. ಹೀಗಾಗಿ ಕೂಡಲೇ ಈ ಕ್ರಮ ಜರುಗಿಸಬೇಕು’ ಎಂದು ಮನವಿ ಸಲ್ಲಿಸಿದರು.
`3 ಎಕರೆಗಿಂತ ಕಡಿಮೆ ಕ್ಷೇತ್ರ ಹೊಂದಿರುವ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ರಾಜ್ಯ ಸರ್ಕಾರ ಹೊರಡಿಸಿದ ಆಂಶವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸರ್ಕಾರದ ನಿಲುವನ್ನು ಸಾರ್ವತ್ರಿಕವಾಗಿ ಪ್ರಕಟಿಸಿದ್ದಾರೆ. ಈ ಅಂಶವನ್ನು ಸಹ ಸರ್ಕಾರವು ತಿದ್ದುಪಡಿ ಪ್ರಮಾಣ ಪತ್ರದಲ್ಲಿ ಉಲ್ಲೆಖೀಸಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲರಾದ ಜೆ.ಎಮ್.ಶೆಟ್ಟಿ ಅಚವೆ ಸಹ ಈ ಬಗ್ಗೆ ಅರಣ್ಯ ಸಚಿವರ ಜೊತೆ ಚರ್ಚೆ ನಡೆಸಿದರು.



