ಚದುರಿ ಹೋಗಿದ್ದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಒಗ್ಗೂಡಿಸಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವವನ್ನು ಹುಟ್ಟುಹಾಕಿದರು. ಆದರೆ, ಗಣಪತಿ ಪ್ರತಿಷ್ಠಾಪನೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡ ಅಂಕೋಲಾದ ಸಾರಿಗೆ ನೌಕರರು ಇದೀಗ ಎರಡು ಬಣವಾಗಿದ್ದು, ಎರಡು ಕಡೆ ಪ್ರತ್ಯೇಕ ಗಣೇಶ ಉತ್ಸವ ಆಚರಣೆಯ ಸಿದ್ಧತೆ ನಡೆಸಿದ್ದಾರೆ.
ಮೊದಲು ಕೆಎಸ್‌ಆರ್‌ಟಿಸಿಯವರು ಬಸ್ ಘಟಕವಿರುವ ವಂದಿಗೆಯಲ್ಲಿ ಗಣೇಶ ಉತ್ಸವ ಆಚರಿಸುತ್ತಿದ್ದರು. ಹೊಸ ಬಸ್ ನಿಲ್ದಾಣ ನಿರ್ಮಾಣವಾದ ನಂತರ ಅಲ್ಲಿ ಗಣಪನ ವಿಗ್ರಹವನ್ನಿರಿಸಿದರು. ಆದರೆ, ಕಳೆದ ವರ್ಷ ಸಿಬ್ಬಂದಿ ನಡುವೆ ಎರಡು ಗುಂಪುಗಳಾಗಿದ್ದು, ಕೆಲವರು ವಂದಿಗೆಯಲ್ಲಿನ ಬಸ್ ಘಟಕದಲ್ಲಿ ಗಣೇಶನನ್ನು ಸ್ಥಾಪಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರಸ್ತುತ ಈ ವರ್ಷ ಸಹ ಇದೇ ತಿಕ್ಕಾಟ ಮುಂದುವರೆದಿದೆ. ಅಂಕೋಲಾ ಕೆಎಸ್‌ಆರ್‌ಟಿಸಿ ಘಟಕದಿಂದ ಈ ಬಾರಿ ಎರಡೆರಡು ಕಡೆ ಗಣೇಶ ಉತ್ಸವ ನಡೆಯಲಿದ್ದು, ಎರಡು ಕಡೆ ಪೈಪೋಟಿ ಜೋರಾಗಿದೆ.
ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್‌ವರೆಗೂ ಹೋಗಿದ್ದು, ಶಾಸಕ-ಸಚಿವರಿಂದಲೂ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಬಸ್ ಘಟಕ ಹಾಗೂ `ಬಸ್ ನಿಲ್ದಾಣ ಎರಡೂ ಕಡೆ ಗಣೇಶ ಉತ್ಸವ ನಡೆಸಿ’ ಎಂದು ಸತೀಶ್ ಸೈಲ್ ಸೂಚಿಸಿದರು. ಅದರ ಪ್ರಕಾರ ಒಂದು ಬಣದವರು ಬಸ್ ಘಟಕದಲ್ಲಿ ಹಾಗೂ ಇನ್ನೊಂದು ಬಣದವರು ಬಸ್ ನಿಲ್ದಾಣದಲ್ಲಿ ಗಣೇಶ ಉತ್ಸವ ಆಚರಿಸುವ ನಿರ್ಣಯ ಮಾಡಿದ್ದಾರೆ.



