ಯಲ್ಲಾಪುರ: ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಬುಧವಾರ ಅಧಿಕಾರವಹಿಸಿಕೊಂಡ ಶ್ರೀದೇವಿ ಪಾಟೀಲ್ ಗುರುವಾರ ಬೆಳಗ್ಗೆ ತಟಗಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಹಾಜರಿದ್ದ ಫಲಾನುಭವಿಗಳು `ದಾಖಲೆಗಳಲ್ಲಿರುವ ಸಹಿ ತಮ್ಮದಲ್ಲ’ ಎಂದು ಖಚಿತಪಡಿಸಿದರು. ಫಲಾನುಭವಿಗಳ ಸಹಿ ಪೋರ್ಜರಿ ಮಾಡಿ ಅವರಿಗೆ ದೊರೆಯಬೇಕಾದ ಹಲವು ಪಡಿತರ ಹಾಗೂ ಮೊಟ್ಟೆಯನ್ನು ಅಂಗನವಾಡಿ ಶಿಕ್ಷಕಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ದೂರಿದರು.
`ಕಳೆದ ಅನೇಕ ವರ್ಷಗಳಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಬೇಕಾದ ಸೌಲಭ್ಯಗಳನ್ನು ಇಲ್ಲಿ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರದಿಂದಲೇ ಬಂದಿಲ್ಲ ಎಂದು ಶಿಕ್ಷಕಿ ಶೈನಾಜ್ ತಿಳಿಸುತ್ತಿದ್ದು, ಬೇರೆ ಅಂಗನವಾಡಿಗಳಿಗೆ ದೊರೆಯುವ ಸೌಕರ್ಯ ಇಲ್ಲಿಲ್ಲ’ ಎಂದು ಸಾತುಗದ್ದೆಯ ವಿಶ್ವನಾಥ ಭಾಗ್ವತ್ ಆರೋಪಿಸಿದರು. `ಕಳೆದ ಐದಾರು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಊರಿನವರು ಪ್ರಶ್ನಿಸಿದರೂ ಸರಿಯಾದ ಉತ್ತರ ದೊರೆಯುತ್ತಿಲ್ಲ. ಇದರಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರದ ಕೊರತೆಯಾಗಿದೆ’ ಎಂದು ಶೀಗೇಪಾಲಿನ ಪ್ರಸನ್ನ ಭಟ್ಟ ವಿವರಿಸಿದರು.
`ನಮಗೂ ಮೊಟ್ಟೆ ಕೊಟ್ಟಿಲ್ಲ. ಈವರೆಗೆ ಎರಡು ಬಾರಿ ಮಾತ್ರ ಪಡಿತರ ಅಕ್ಕಿ ವಿತರಿಸಲಾಗಿದ್ದು, ನಾವು ಸಹಿ ಹಾಕಿ ಹೋದ ನಂತರ ಎಲ್ಲಾ ಪಡಿತರ ನೀಡಿದ ಬಗ್ಗೆ ರಿಜಿಸ್ಟರ್ ಬರೆಯಲಾಗಿದೆ’ ಎಂದು ಬಾಲಿಗದ್ದೆಯ ಶ್ರೀಮತಿ ಸಿದ್ದಿ, ಲಕ್ಷ್ಮೀ ಸಿದ್ದಿ ದೂರಿದರು. `ನಮಗೂ ಅನ್ಯಾಯವಾಗಿದೆ’ ಎಂದು ಖತಿಜಾ ಶೇಖ್ ತಿಳಿಸಿದರು.
ಬಾಲ ವಿಕಾಸ ಸಮಿತಿಯೇ ಸರಿಯಿಲ್ಲ!
`ಅಂಗನವಾಡಿಗಳ ಕುಂದು-ಕೊರತೆ ನಿವಾರಣೆಗೆ ಬಾಲ ವಿಕಾಸ ಸಮಿತಿ ರಚಿಸಬೇಕಿದ್ದು, ಆ ಮೂಲಕ ಲೆಕ್ಕಪತ್ರಗಳ ನಿರ್ವಹಣೆ ನಡೆಯಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ತಿಳಿಸಿದ್ದು, ಆ ಕುರಿತಾದ ಕಡತ ಪರಿಶೀಲಿಸಿದಾಗ ಸಮಿತಿ ಅಧ್ಯಕ್ಷರ ಅವಧಿ ಮುಗಿದಿದ್ದರೂ ಬದಲಾವಣೆ ಆಗಿರಲಿಲ್ಲ. ಸ್ಥಳೀಯ ಗ್ರಾ ಪಂ ಸದಸ್ಯರೊಬ್ಬರ ಹೆಸರಿನಲ್ಲಿ ಕೆಲ ವ್ಯವಹಾರಗಳಿರುವ ಬಗ್ಗೆಯೂ ಊರಿನವರು ಅನುಮಾನ ವ್ಯಕ್ತಪಡಿಸಿದರು. ಬೇರೆ ಊರಿನಲ್ಲಿರುವ ಗ್ರಾ ಪಂ ಸದಸ್ಯರ ಹೆಸರನ್ನು ಅಂಗನವಾಡಿಗೆ ಸಂಬoಧಿಸಿದ ಕಡತದಲ್ಲಿ ನಮೂದಿಸಿದ ಬಗ್ಗೆ ಶಿಕ್ಷಕಿಯನ್ನು ಪ್ರಶ್ನಿಸಿದಾಗ `ತಪ್ಪಾಗಿ ಆ ಹೆಸರು ನಮೂದಾಗಿದೆ’ ಎಂದು ಜಾರಿಕೊಂಡರು.
ಸಹಿ ಪೋರ್ಜರಿ ಕುರಿತು ಅಧಿಕಾರಿಗಳು ಪ್ರಶ್ನಿಸಿದಾಗ `ಅವರು ಬರಲಿಲ್ಲ. ಹೀಗಾಗಿ ನಾನೇ ಸಹಿ ಹಾಕಿದೆ’ ಎಂದು ಉತ್ತರಿಸಿದ್ದು, ಈ ಉತ್ತರ ಸಹಿಸದ ಊರಿನವರು ಶಿಕ್ಷಕಿಯನ್ನು ತರಾಠೆಗೆ ತೆಗೆದುಕೊಂಡರು. `ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಬೇಕಾದ ಮೊಟ್ಟೆ ಹಾಗೂ ಪಡಿತರಗಳ ಪೈಕಿ ಕೆಲವನ್ನು ಮಾತ್ರ ವಿತರಿಸಿ ಎಲ್ಲವನ್ನು ನೀಡಿದ ಬಗ್ಗೆ ಅಂಗನವಾಡಿಯಲ್ಲಿ ಸಹಿ ಪಡೆಯಲಾಗುತ್ತದೆ. ಸರ್ಕಾರದಿಂದ ನೀಡಬೇಕಾದ ಯಾವುದೇ ಸೌಕರ್ಯವನ್ನು ನೀಡದೇ, ದಾಖಲೆಗಳ ತಿದ್ದುಪಡಿ ಕಾರ್ಯ ನಡೆದಿದೆ’ ಎಂದು ದೂರಿದರು. ಅಂಗನವಾಡಿಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಇಲಾಖೆಯ ವ್ಯವಸ್ಥಾಪಕಿ ಪ್ರಮೋದ ಚಂದ್ರಶೇಖರ್ ಸಹ ಶಿಕ್ಷಕಿಯನ್ನು ತರಾಠೆಗೆ ತೆಗೆದುಕೊಂಡರು. ಈ ರೀತಿ ತಪ್ಪು ಮಾಡದಂತೆ ಶಿಕ್ಷಕಿಗೆ ಎಚ್ಚರಿಕೆ ನೀಡಿದರು.
`ಈ ಬಗ್ಗೆ ಲಿಖಿತ ದೂರು ಸಲ್ಲಿಸಿದಲ್ಲಿ ಅಂಗನವಾಡಿ ಶಿಕ್ಷಕಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ತಿಳಿಸಿದ್ದು, ವಿಶ್ವನಾಥ ಭಾಗ್ವತ್ ಲಿಖಿತ ದೂರು ಸಲ್ಲಿಸಿದ್ದಾರೆ. ಜೊತೆಗೆ ಕಳೆದ ಐದು ವರ್ಷದ ಅವಧಿಯಲ್ಲಿ ಈ ಅಂಗನವಾಡಿಗೆ ದೊರೆತ ಸೌಕರ್ಯ ಹಾಗೂ ಫಲಾನುಭವಿಗಳಿಗೆ ವಿತರಿಸಿದ ಪಡಿತರದ ಯಾದಿ ಪೂರೈಸುವಂತೆಯೂ ಅವರು ಅರ್ಜಿ ಸಲ್ಲಿಸಿದ್ದಾರೆ.
ಪೌಷ್ಠಿಕ ಆಹಾರ ವಿತರಣೆ ವಿಷಯವಾಗಿ ಅಂಗನವಾಡಿ ಶಿಕ್ಷಕಿ ವಿರುದ್ಧ ಮೇಲಧಿಕಾರಿಗಳಿಗೆ ದೂರಿದ ವಿಡಿಯೋ ಇಲ್ಲಿ ನೋಡಿ..



