ಯಲ್ಲಾಪುರ ತಾಲೂಕಾ ವೈದ್ಯಾಧಿಕಾರಿಯಾಗಿರುವ ಡಾ ನರೇಂದ್ರ ಪವಾರ್ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಮಣ್ಣಿನ ಗಣಪತಿ ವಿಗ್ರಹ ತಯಾರಿಸಿದ್ದಾರೆ. ಈ ಮೂರ್ತಿಗೆ ಪಾಲಕ್ ಸೊಪ್ಪು, ಬಿಟರೂಟು ಹಾಗೂ ಅರಶಿನ-ಕುಂಕುಮ ಬಳಸಿ ಸುಣ್ಣ-ಬಣ್ಣ ಬಡಿದಿದ್ದಾರೆ.
ಪರಿಸರ ಸ್ನೇಹಿ ಗಣಪನನ್ನು ಶನಿವಾರ ಪೂಜಿಸಿ ಸಂಜೆ ಅದನ್ನು ವಿಸರ್ಜಿಸಿದರು. ಶಿರಸಿಯಲ್ಲಿ ದೊಡ್ನಳ್ಳಿ ಬಳಿಯ ಲಂಡಕನಳ್ಳಿಯಲ್ಲಿ ಅವರ ಮನೆಯಿದೆ. ಅಲ್ಲಿಯೇ ಅವರು ಗಣೇಶ ಹಬ್ಬವನ್ನು ಆಚರಿಸಿದರು. 2007ರಿಂದಲೂ ಅವರು ಸ್ವತಃ ಮಣ್ಣಿನ ಗಣಪನ ವಿಗ್ರಹ ರಚಿಸಿ ಪೂಜಿಸುತ್ತಿದ್ದಾರೆ. ಗಣೇಶ ಹಬ್ಬಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಬಿಡುವು ಸಿಕ್ಕಾಗಲೆಲ್ಲ ಊರಿಗೆ ತೆರಳಿ ಮೂರ್ತಿ ರಚನೆಯ ಕೆಲಸ ಮಾಡುತ್ತಾರೆ.
ಈ ಬಾರಿ ಎರಡು ಅಡಿ ಎತ್ತರದ ಗಣಪನ ವಿಗ್ರಹವನ್ನು ಅವರು ತಯಾರಿಸಿದ್ದರು. ಇದಕ್ಕಾಗಿ 25 ದಿನಗಳ ಕಾಲ 1-2 ತಾಸು ಸಮಯ ವ್ಯಯಿಸಿದ್ದರು. ಈ ಸಲ ಶಿರಸಿ ಮಾರಿಕಾಂಬಾ ದೇವಸ್ಥಾನದ ಸುರೇಶ್ ಪೂಜಾರಿ ಗಣಪತಿ ರಚನೆಗೆ ಅಗತ್ಯವಿರುವ ಮಣ್ಣನ್ನು ಹದ ಮಾಡಿ ನೀಡಿದ್ದರು.