`ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಬಿದ್ದಿದ್ದು ಇಲ್ಲಿನ ಮೀನುಗಾರರನ್ನು ಕಾಪಾಡು’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಭಗವಂತನಲ್ಲಿ ಪ್ರಾರ್ಥಿಸಿದರು. ಇದಕ್ಕಾಗಿ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಅರಬ್ಬಿ ಸಮುದ್ರದಲ್ಲಿ ಸ್ವತ: ದೋಣಿ ಚಲಾಯಿಸಿದ ಅವರು ಹಣ್ಣು-ಕಾಯಿಗಳನ್ನು ಹೊಂದಿದ ಬಾಗೀನವನ್ನು ಸಮುದ್ರಕ್ಕೆ ಸಲ್ಲಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಈ ಸಲ ಮೀನುಗಾರಿಕೆ ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಪ್ರಕೃತಿ ವಿಕೋಪ ಮತ್ತು ಮತ್ಸ್ಯಕ್ಷಾಮದ ಕಾರಣ ಬಹುತೇಕ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಮೀನುಗಾರಿಕೆಗೆ ತೆರಳುವವರಿಗೆ ಬೋಟಿನ ಡಿಸೇಲ್ ವೆಚ್ಚಕ್ಕೆ ಸರಿದೂಗುವಷ್ಟು ಸಹ ಮೀನು ಸಿಗುತ್ತಿಲ್ಲ. ಮೀನುಗಾರಿಕಾ ಉದ್ಯಮ ಸಸೂತ್ರವಾಗಿ ಆರಂಭವಾಗದ ಮತ್ತು ಮೀನುಗಾರಿಕೆ ಮೇಲೆ ಭಾರೀ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ.
ಮೀನುಗಾರರ ಸಮಸ್ಯೆ ಅರಿತ ಸಚಿವ ಮಂಕಾಳು ವೈದ್ಯ ಭಾನುವಾರ ಮೀನುಗಾರರು ನಂಬಿರುವ ಶಕ್ತಿ ಕ್ಷೇತ್ರವಾದ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಮೀನುಗಾರಿಕೆ ಉದ್ಯಮ ಸಸೂತ್ರವಾಗಿ ನಡೆದು ಮೀನುಗಾರರಿಗೆ ಒಳಿತು ಮಾಡುವಂತೆ ಪ್ರಾರ್ಥಿಸಿದರು. ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಮೀನುಗಾರರ ಮುಖಂಡರಾದ ಜಟಕಾ ಮೊಗೇರ, ಯಾದವ ಮೊಗೇರ, ವೆಂಕಟ್ರಮಣ ಮೊಗೇರ, ನಾರಾಯಣ ಮೊಗೇರ್ ಇತರರು ಸಚಿವರ ಜೊತೆಯಿದ್ದರು.