ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ `ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’ಗೆ ಪತ್ರಕರ್ತರು, ಸಂಘ ಸಂಸ್ಥೆ ಹಾಗೂ ಸಾರ್ವಜನಿಕರಿಂದ ನಾಮನಿರ್ದೇಶನ ಆಹ್ವಾನಿಸಿದೆ.
ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಾಗೂ ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ನೀಡಲು 2001ರಲ್ಲಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿತು. ಅದರಂತೆ 2001ರಿಂದ 2016ರವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅರ್ಹ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ಪ್ರಸ್ತುತ 2017ನೇ ಸಾಲಿನಿಂದ 2023ನೇ ಸಾಲಿನವರೆಗೆ ಅರ್ಹ ಪತ್ರಕರ್ತರಿಗೆ ಈ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.
ಪತ್ರಿಕೋದ್ಯಮದಲ್ಲಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ಅರ್ಹ ಪತ್ರಕರ್ತರನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ನಾಮನಿರ್ದೇಶನ ಮಾಡಬಹುದು. ವೈಯುಕ್ತಿಕವಾಗಿ ಪತ್ರಕರ್ತರು ಸಹ ಅರ್ಜಿ ಸಲ್ಲಿಸಬಹುದು. 2017ರಿಂದ 2023ರ ಅವಧಿಯ ಎರಡೂ ವಿಭಾಗಗಳ ಪ್ರಶಸ್ತಿಗಳಿಗೆ ತಲಾ 7 ಅರ್ಹ ಪತ್ರಕರ್ತರನ್ನು ಆಯ್ಕೆ ನಡೆಯುತ್ತದೆ. ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂ ನಗದು, ಪುರಸ್ಕಾರ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಹೊಂದಿದೆ.
ಓದುಗರು
ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, (ಇನ್‌ಫೆಂಟ್ರಿ ರಸ್ತೆ)
ಬೆಂಗಳೂರು 560001 ಇಲ್ಲಿ ಅಥವಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸ tsraward@gmail.com ಮೂಲಕ ಶಿಫಾರಸ್ಸು ಮಾಡಬಹುದು.
ಸೆ 30 ಶಿಫಾರಸ್ಸು ಮಾಡಲು ಕೊನೆ ದಿನ.
ಪಿಡಿಓ ಕಾರ್ಯಕ್ಕೆ ಜಿ ಪಂ ಮುಖ್ಯಾಧಿಕಾರಿ ಮೆಚ್ಚುಗೆ
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೀಡುವ `ಪಿಡಿಒ ಆಫ್ ದಿ ಮಂತ್’ ಪ್ರಶಸ್ತಿಗೆ ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಹುರಕಡ್ಲಿ ಆಯ್ಕೆಯಾಗಿದ್ದು, ಸೋಮವಾರ ಕಾರವಾರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಪ್ರಶಸ್ತಿ ಪತ್ರ ವಿತರಿಸಿದರು. ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಅಭಿವೃದ್ಧಿ ಶಾಖೆ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ ಉಪಸ್ಥಿತರಿದ್ದರು.
ವಿಶ್ವದರ್ಶನಕ್ಕೆ BCAಗೆ ದೊರೆತ ಮಾನ್ಯತೆ
ಯಲ್ಲಾಪುರ: ವಿಶ್ವದರ್ಶನ ಬಿಸಿಎ ಕಾಲೇಜಿಗೆ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್’ನ ಮಾನ್ಯತೆ ದೊರೆತಿದೆ. 2023 – 2024ನೇ ಸಾಲಿನಲ್ಲಿ ಬಿಸಿಎ ಕಾಲೇಜು ಶುರುವಾಗಿದ್ದು, ಕಾಲೇಜಿನ ಮಾನದಂಡಗಳನ್ನು ಪರಿಶೀಲಿಸಿ ಈ ಮಾನ್ಯತೆ ನೀಡಲಾಗಿದೆ. `ಇದರಿಂದ ದೇಶ ವಿದೇಶ ಮಟ್ಟದ ತಂತ್ರಜ್ಞಾನ ಅರಿವು ಹಾಗೂ ತಂತ್ರಜ್ಞಾನದ ತರಬೇತಿ, ವಿದ್ಯಾರ್ಥಿವೇತನ ಹಾಗೂ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ವಿದ್ಯಾರ್ಥಿಗಳಿಗೆ ದೊರೆಯಲಿದೆ’ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.
ಬಿಜೆಪಿ ಸದಸ್ಯತ್ವಕ್ಕೆ ರೂಪಾಲಿ ಮುತುವರ್ಜಿ
ಕಾರವಾರ: ಕಾರವಾರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಜೋರಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಎಲ್ಲಡೆ ಓಡಾಡಿ ಬಿಜೆಪಿ ಸದಸ್ಯತ್ವ ಮಾಡಿಸುತ್ತಿದ್ದಾರೆ. ಸೋಮವಾರ ಜನಸ0ಘದ ಹಿರಿಯ ಕಾರ್ಯಕರ್ತರಾದ ವಿಠ್ಠಲ್ ಕೇಣಿ ಹಾಗೂ ರಾಮದಾಸ್ ಅಣವೇಕರ್ ಮನೆಯಲ್ಲಿ ಅವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರ ಉಪಸ್ಥಿತಿ
ಹಳಿಯಾಳ: ವಿಘ್ನ ವಿನಾಶಕ ಗಣಪತಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದ್ದು, ಶಾಸಕ ಆರ್ ವಿ ದೇಶಪಾಂಡೆ ಕುಟುಂಬದವರ ಜೊತೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ವಿವಿಧ ಪೂಜಾರಾಧನೆ ಹಾಗೂ ಗಣಹೋಮಗಳು ನಡೆದವು.
ಈ ಹೊಂಡದಲ್ಲಿಯೇ ಮೂರ್ತಿ ವಿಸರ್ಜಿಸಿ!
ದಾಂಡೇಲಿ: ಗಣೇಶನ ಹಬ್ಬದ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಬಸವೇಶ್ವರ ನಗರದಲ್ಲಿ ನಿರ್ಮಿಸಿರುವ ಹೊಂಡದಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜಿಸುವಂತೆ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಮನವಿ ಮಾಡಿದ್ದಾರೆ. `ಎಲ್ಲರೂ ಅವರವರ ಮನೆಯಲ್ಲಿ ಸ್ಥಾಪಿಸಿದ ಮೂರ್ತಿಯನ್ನು ಸರ್ಕಾರ ಸೂಚಿಸಿದ ಕಡೆ ವಿಸರ್ಜಿಸಬೇಕು. ಆ ಮೂಲಕ ಪರಿಸರ ಮಾಲಿನ್ಯ ತಡೆಯಬೇಕು’ ಎಂದವರು ಕೋರಿದರು.
ಗಣೇಶ ಉತ್ಸವ: ಶಬ್ದ ಮಾಲಿನ್ಯಕ್ಕೆ ಇಲ್ಲ ಅವಕಾಶ
ಸಿದ್ದಾಪುರ: ಸರ್ವೋಚ್ಛ ನ್ಯಾಯಾಲಯ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಧ್ವನಿ ವರ್ಧಕವನ್ನು ಬಳಸದಂತೆ ಸಿಪಿಐ ಕುಮಾರ ಕೆ ಸೂಚಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಧ್ವನಿ ವರ್ಧಕ ಮಾಲಕರ ಸಭೆ ನಡೆಸಿದ ಅವರು `ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಒತ್ತಾಯಕ್ಕೆ ಮಣಿದು ದೊಡ್ಡದಾಗಿ ಡಿಜೆ ಬಳಸಿದಲ್ಲಿ ತಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.
ಅಡುಗೆ ಮಾಡಲು ಬೇಕು ಯೋಗ್ಯ ಜನ
ಮುಂಡಗೋಡ: ತಾಲೂಕಿನ ವಿವಿಧ ಶಾಲೆಗಳಿಗೆ ಅಡುಗೆ ಮಾಡಲು ಯೋಗ್ಯ ಜನ ಬೇಕಾಗಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವನಗರ ಒಬ್ಬ ಮುಖ್ಯ ಅಡುಗೆಯವರು (ಎಸ್ ಸಿ/ ಎಸ್ ಟಿ ಮೀಸಲಾತಿ) ಹಾಗೂ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ದೇಶಪಾಂಡೆನಗರ, ಒಬ್ಬ ಮುಖ್ಯ ಅಡುಗೆಯವರು, (ಎಸ್‌ಸಿ/ಎಸ್‌ಟಿ ಮೀಸಲಾತಿ) ಅಕ್ಷರ ದಾಸೋಹದ ಯೋಜನೆ ಅಡಿಯಲ್ಲಿ ನೇಮಕಾತಿಗಾಗಿ ಯೋಗ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು 30ರಿಂದ 40 ವರ್ಷ ವಯೋಮಾನದ ಆಸಕ್ತ ಮಹಿಳೆಯಾಗಿದ್ದು, 7 ತರಗತಿ ಉತ್ತೀರ್ಣರಾಗಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರ ಲಗತ್ತಿಸಿ ಕೈಬರಹದ ಅರ್ಜಿಯೊಂದಿಗೆ ಸೆ.23ರೊಳಗಾಗಿ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಮುಂಡಗೋಡ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.