ತಂದೆ ಇಲ್ಲದ ಮಕ್ಕಳಿಗೆ ಸರ್ಕಾರದಿಂದ 24 ಸಾವಿರ ರೂ ಸಿಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿರುವುದು ಅನಾಥ ಮಕ್ಕಳ ಕಚೇರಿ ಅಲೆದಾಟಕ್ಕೆ ಕಾರಣವಾಗಿದೆ. ನಿತ್ಯ 20ಕ್ಕೂ ಅಧಿಕ ಜನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುತ್ತಿದ್ದಾರೆ!
ಪಾಲಕರು ಜೈಲಿನಲ್ಲಿದ್ದು ಅವರ ಮಕ್ಕಳು ತೊಂದರೆಯಲ್ಲಿದ್ದವರಿಗೆ ಮೊದಲ ಆದ್ಯತೆ ನೀಡಿ ಸರ್ಕಾರ ನೆರವು ನೀಡುತ್ತದೆ. ಬಾಲ ಮಂದಿರದಲ್ಲಿದ್ದು ಬಿಡುಗಡೆ ಆದ ಮಕ್ಕಳಿಗೆ ಎರಡನೇ ಹಂತದ ಆದ್ಯತೆ ಅನುಸಾರ ನೆರವು ನೀಡಲಾಗುತ್ತದೆ. ಅದೂ ಮುಗಿದ ಮೇಲೆ ಭಿಕ್ಷುಕ ಹಾಗೂ ತಂದೆ-ತಾಯಿ ಇಲ್ಲದ ಅನಾಥ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಈ ಎಲ್ಲಾ ಬಗೆಯ ಮಕ್ಕಳು ಭರ್ತಿಯಾದ ನಂತರ ತಂದೆ ಅಥವಾ ತಾಯಿ ಇಲ್ಲದ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ. ಪ್ರತಿ ತಿಂಗಳು 4 ಸಾವಿರ ರೂ ಆರ್ಥಿಕ ನೆರವು ಅಂಥವರಿಗೆ ಸಿಗಲಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಆದ್ಯತೆಯ ಮಕ್ಕಳಿಗೆ ನೆರವು ನೀಡಲಾಗಿದ್ದು ಅದರಲ್ಲಿಯೂ ಈ ವರ್ಷದ ಅರ್ಜಿ ಪಡೆಯುವ ಪ್ರಕ್ರಿಯೆ ಜೂನ್ ತಿಂಗಳಿನಲ್ಲಿಯೇ ಮುಕ್ತಾಯವಾಗಿದೆ.
ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಅನೇಕ ಮಕ್ಕಳು ಪ್ರತಿ ದಿನ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರುತ್ತಿದ್ದಾರೆ. ಅಲ್ಲಿ ಕಚೇರಿ ಅಲೆದಾಟ ನಡೆಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಯಲ್ಲಾಪುರ, ಮುಂಡಗೋಡು, ಹಳಿಯಾಳ, ಸಿದ್ದಾಪುರ ಸೇರಿ ದೂರ ದೂರದ ಊರಿನಿಂದ ಮಕ್ಕಳು ಬರುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ಬಡ ಮಕ್ಕಳು ಅನಗತ್ಯವಾಗಿ ತಮ್ಮ ಹಣ ಹಾಗೂ ಶ್ರಮ ವ್ಯಯಿಸುತ್ತಿದ್ದಾರೆ. ಸರ್ಕಾರಿ ಹಣ ಸಿಗುತ್ತದೆ ಎಂಬ ಆಸೆಯಿಂದ ಕಚೇರಿ ಅಲೆದಾಟ ನಡೆಸುವವರಿಗೆ ಆ ಹಣ ಸಿಗುವ ಸಾಧ್ಯತೆಗಳಿಲ್ಲ.
ಅರ್ಜಿ ಸಲ್ಲಿಸಲು ದೂರದ ಊರಿನಿಂದ ಆಗಮಿಸುವ ಮಕ್ಕಳಿಂದ ಅರ್ಜಿ ಸ್ವೀಕರಿಸದೇ ಇರಲು ಅಧಿಕಾರಿ-ಸಿಬ್ಬಂದಿಗೆ ಆಗುತ್ತಿಲ್ಲ. ಏಕಪಾಲಕರನ್ನು ಹೊಂದಿದ ಮಕ್ಕಳು ಸಹ ಅರ್ಜಿ ಸಲ್ಲಿಸಲು ಅರ್ಹರೇ ಆಗಿದ್ದು, ಮೊದಲ ಆದ್ಯತೆ ಅವರಿಗಲ್ಲ. ಮಂಗಳೂರಿನ ಮಕ್ಕಳ ಘಟಕದ ಮೊಹರು ಹೊಂದಿದ ನಮೂನೆಯೊಂದು ಎಲ್ಲಡೆ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ `ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ’ ಎಂಬ ಸುದ್ದಿ ಸತ್ಯವಲ್ಲ!
ಸುಳ್ಳು ಸುದ್ದಿ ಡಿಲಿಟ್ ಮಾಡಿ… ಸತ್ಯವನ್ನು ಶೇರ್ ಮಾಡಿ…