ಅಂಕೋಲಾ: `ದೇಶದ ಎಲ್ಲಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ನೀಡಿಲು ಬಿಜೆಪಿ ಸದಸ್ಯತ್ವ ಪಡೆಯಬೇಕು’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಸದಸ್ಯತ್ವ ಅಭಿಯಾನ ಅಂಗವಾಗಿ ಸಭೆ ನಡೆಸಿದ ಅವರು `ಬಿಜೆಪಿ ಸದಸ್ಯತ್ವ ಪಡೆಯಲು 8800002024 ಸಂಖ್ಯೆಗೆ ಮಿಸ್ ಕಾಲ್ ನೀಡಿ’ ಎಂದವರು ಕರೆ ನೀಡಿದರು. `ಪಕ್ಷ ಸಂಘಟನೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಪಕ್ಷಕ್ಕೆ ದ್ರೋಹ ಮಾಡಿದವರನ್ನು ದೂರವಿಡಬೇಕು’ ಎಂದವರು ಹೇಳಿದರು. `ಕಾರ್ಯಕರ್ತರು ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಿ’ ಎಂದರು.
ಯಲ್ಲಾಪುರದಲ್ಲಿ ವ್ಯಾಪಕ ಕೊಳೆ!
ಯಲ್ಲಾಪುರ: ತಾಲೂಕಿನ ಎಲ್ಲಡೆ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಅಡಿಕೆಗೆ ಕೊಳೆ ರೋಗ ಆವರಿಸಿದೆ. ಪ್ರತಿಯೊಬ್ಬರ ತೋಟಿಗರು ಸಹ ಇದೀಗ ಕೊಳೆ ರೋಗದ ಬಗ್ಗೆಯೇ ಮಾತನಾಡುತ್ತಿದ್ದಾರೆ. ವಜ್ರಳ್ಳಿ ಭಾಗದಲ್ಲಿ ಸಾಕಷ್ಟು ರೈತರು ಕೊಳೆ ರೋಗದಿಂದ ತತ್ತರಿಸಿದ್ದಾರೆ. ಉಮ್ಮಚ್ಗಿ-ಮಂಚಿಕೇರಿ ಪ್ರದೇಶದಲ್ಲಿ ಸಹ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಕೊಳೆ ರೋಗ ಹರಡುತ್ತಿದೆ. ಕನೇನಳ್ಳಿ, ಕೋಟೆಮನೆ, ಸೀಗೆಮನೆ, ಕಾನಗೋಡ, ಚವತ್ತಿ, ತಾರೆಹಳ್ಳಿ, ತುಡುಗುಣಿ ಭಾಗದಲ್ಲಂತೂ ಇದಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ.
ನರೆಗಾ ಅಡಿ ಕಾಲುವೆ ನಿರ್ಮಾಣ
ಮುಂಡಗೋಡ: ಕೋಡಂಬಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಾಪುರ ಗ್ರಾಮದ ಅರಣ್ಯ ಪ್ರದೇಶದದಲ್ಲಿ ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ಟ್ರಂಚ್ ತೆಗೆಯುವ ಕಾಮಗಾರಿ ಶುರುವಾಗಿದೆ.
ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಂಗಳವಾರ ಅಲ್ಲಿಗೆ ಭೇಟಿ ನೀಡಿ ಕಾರ್ಮಿಕರಿಗೆ ಮಾಹಿತಿ ನೀಡಿದರು. `ಈ ಕಾಮಗಾರಿ ಮುಗಿದ ನಂತರ ಮಳೆನೀರು ಕೋಯ್ಲು, ಕೊಳವೆ ಬಾವಿ ಮರುಪೂರಣ ಘಟಕ, ಕೆರೆ ಕಾಮಗಾರಿಯಂತಹ ಸಮುದಾಯ ಕಾಮಗಾರಿ ಪ್ರಾರಂಭಿಸಬೇಕು. ಕೂಲಿಕಾರರ ಬೇಡಿಕೆಯಂತೆ ನಿರಂತರ ಕೂಲಿ ಕೆಲಸ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ’ ಎಂದವರು ಹೇಳಿದರು.
ಶ್ರೀರಂಗ ಕಟ್ಟಿ ಅವರಿಂದ ಪುಸ್ತಕ ಕೊಡುಗೆ
ಯಲ್ಲಾಪುರ: ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರ `ಬ್ಯಾಸರಕಿ ಬ್ಯಾಡೋ ನಗುವಾಗ’ ಎಂಬ ಕೃತಿ ಸೆಪ್ಟೆಂಬರ್ 12ರಂದು ಬಿಡುಗಡೆ ಆಗಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ಸಾಹಿತಿ ಅರುಣಕುಮಾರ ಹಬ್ಬು ಈ ಕೃತಿ ಬಿಡುಗಡೆ ಮಾಡಲಿದ್ದಾರೆ. ಕಾಲೇಜು ಪ್ರಾಚಾರ್ಯ ಆರ್ ಡಿ ಜನಾರ್ಧನ ಹಾಗೂ ಸಾಹಿತಿ ವನರಾಗ ಶರ್ಮಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.