ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. ಇಲ್ಲಿ ಏಳು ದಿನಗಳ ಕಾಲ ಮಾತ್ರ ದೇವಿ ದರ್ಶನ ಭಾಗ್ಯ ದೊರೆಯುತ್ತದೆ.
ಶಕ್ತಿ ದೇವತೆಯಾಗಿರುವ ಸಾತೇರಿ ದೇವಿ ಪವಾಡಗಳನ್ನು ಅನೇಕರು ಅನುಭವಿಸಿದ್ದಾರೆ. 358 ದಿನ ಗರ್ಭಗುಡಿಯಲ್ಲಿರುವ ಸಾತೇರಿ ದೇವಿ ದರ್ಶನಕ್ಕೆ ಯಾರಿಗೂ ಅವಕಾಶವಿಲ್ಲ. ಜಾತ್ರೆ ಅವಧಿಯಲ್ಲಿ ಗರ್ಭಗುಡಿ ಬಾಗಿಲು ಸ್ವಯಂ ಚಾಲಿತವಾಗಿ ತೆರೆಯುತ್ತದೆ ಎಂಬ ನಂಬಿಕೆಯಿದೆ. ಐತಿಹಾಸಿಕ ಹಿನ್ನೆಲೆಯಿಂದ ಕೂಡಿದ ದೇವಿಯ ಜಾತ್ರಾ ಮಹೋತ್ಸವದ ಆಚರಣೆ ಪರಂಪರೆಗಳೆಲ್ಲ ತೀರಾ ವಿಭಿನ್ನವಾಗಿದೆ. ಸಾತೇರಿ ದೇವಿಯ ದೇವಸ್ಥಾನದ ಸುತ್ತಲು ಐದು ದೇವಾಲಯ ಹಾಗೂ ಅದಕ್ಕೆ ಹೊಂದಿಕೊoಡಿರುವ ಗ್ರಾಮ ಪುರುಷ, ರಾಮನಾಥ, ಚಣಕಾದೇವಿ, ಮ್ಹಾಳಸಾ ನಾರಾಯಣಿ ದೇವಾಲಯ ಕಾಳಮೋರ ಚಣಕಭಕ್ತ, ಕಠೀಂದ್ರ, ಜೈಲ್ ಪುರುಷ ಮೊದಲಾದ ಗುಡಿಗಳಿವೆ. ಇಲ್ಲಿನ ಪರಿವಾರ ದೇವ ದೇವತೆಗಳ ದೇವಾಲಯ, ಗುಡಿಗಳಲ್ಲಿ ದೇವರ ಪ್ರತ್ಯೇಕ ಆಚರಣೆಗಳು ನೆರವೇರುತ್ತದೆ. ಅದರಂತೆ ಸಾತೇರಿ ದೇವಿಯ ವಾರ್ಷಿಕ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.
ಹಣಕೋಣದ ಸಾತೇರಿ ಹಾಗೂ ಚಣಕಾದೇವಿ ಸಹೋದರಿಯರು. ಈ ದೇವಿಯರು ಪ್ರತ್ಯೇಕ ಕಡೆಗಳಲ್ಲಿ ನೆಲೆಸಿ, ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದರು. ಹಣಕೋಣದಲ್ಲಿದ್ದ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯ ಸಹಕಾರ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಸಹಕರಿಸುತ್ತಿದ್ದಳು. ಜನರಿಗೆ ಯಾವುದೇ ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೆ ತೆರಳುವ ವೇಳೆಗೆ ಚಿನ್ನದಾಭರಣದ ಅಗತ್ಯವಿದ್ದರೆ ದೇವಿಯ ಬಳಿ ಬಂದು ಭಕ್ತಿಯಿಂದ ಕೇಳಿದರೆ ಬಂಗಾರದ ಆಭರಣಗಳು ಭಕ್ತರ ಮುಂದಿರುತ್ತಿದ್ದವು. ಆದರೆ ಅವುಗಳನ್ನು ನಿಗದಿತ ಸಮಯದ ನಂತರ ಪುನಃ ದೇವಿಗೆ ಮರಳಿಸಬೇಕಿತ್ತು ಎಂಬ ಕಥೆ ಇನ್ನೂ ಪ್ರಚಲಿತವಾಗಿದೆ.
ಇದೀಗ ದೇವಾಲಯ ಇರುವ ಸ್ಥಳದಲ್ಲೇ ದೇವಿ ನೆಲೆಸಿದ್ದಳು. ದೇವಾಲಯದ ಮುಂದೆ ಇರುವ ಬಾವಿಯ ನೀರನ್ನು ಉಪಯೋಗಿಸುತ್ತಿದ್ದಳು. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮುಗಿಸಿ ಕೂದಲು ಬಾಚಿಕೊಳ್ಳುತ್ತಿದ್ದಾಗ ದುಷ್ಟನೊಬ್ಬ ದೇವಿಯ ಕಡೆಗೆ ವಕ್ರದೃಷ್ಟಿ ಬೀರಿ, ಮುನ್ನುಗ್ಗಿದಾಗ ಆಕೆ ಪಕ್ಕದಲ್ಲಿದ್ದ ಬಾವಿಯಲ್ಲಿ ಹಾರಿದಳು. ಸಮೀಪದ ಬಾವಿಯಲ್ಲಿ ದೇವಿಯ ಪಾದುಕೆ, ಹಣಿಗೆ ಕಂಡವು. ಇದಾದ ಕೆಲ ದಿನಗಳ ನಂತರ ಊರಿನ ಹಿರಿಯ ವ್ಯಕ್ತಿಯೊಬ್ಬರ ಕನಸಿನಲ್ಲಿ ಕಾಣಿಸಿಕೊಂಡು ತಾನು ಅದೃಶ್ಯಳಾದ ಬಗ್ಗೆ ತಿಳಿಸಿದಳು. ವರ್ಷಕ್ಕೆ ಒಮ್ಮೆ ಮಾತ್ರ ಅಂದರೆ ದೇವಾಲಯದ ಬಾಗಿಲು ತೆರೆದು 7 ದಿನಗಳ ಕಾಲ ಮಾತ್ರ ತನ್ನ ದರ್ಶನ ನೀಡುವುದಾಗಿ ದೇವಿ ತಿಳಿಸಿದ್ದಳು. ತಾನು ನೆಲೆಸಿದ ಸ್ಥಳದಲ್ಲಿ ಗುಡಿ ನಿರ್ಮಿಸುವ ಬೇಡಿಕೆ ಇಟ್ಟಳು. ಅದಾದ ನಂತರ ಅಲ್ಲಿ ಗುಡಿ ನಿರ್ಮಾಣ ನಡೆದು, ಗ್ರಾಮಸ್ಥರೆಲ್ಲ ಸೇರಿ ದೇವಾಲಯ ಅಭಿವೃದ್ದಿ ನಡೆಸಿದರು.
ಗಣೇಶ ಚತುರ್ಥಿಯ ನಾಲ್ಕು ದಿನದ ನಂತರ ಸಾತೇರಿ ದೇವಿಯ ದೇವಸ್ಥಾನದ ಬಾಗಿಲು ತೆರೆಯುತ್ತದೆ. ಈ ಜಾತ್ರೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಜಾತ್ರಾ ಮಹೋತ್ಸವದ ಏಳು ದಿನದ ಅವಧಿಯಲ್ಲಿ ಮಿರಾಶಿಗಳಿಗೆ ಪ್ರಥಮ ದರ್ಶನದ ಆದ್ಯತೆ. ಇಲ್ಲಿನ ಒಂದೊAದು ಸಮಾಜದವರಿಗೆ ಬೇರೆ ಬೇರೆ ಜವಾಬ್ದಾರಿವಹಿಸಲಾಗಿದೆ. ಆಚಾರಿ, ಗುನಗಿ, ದೇವಳಿ, ವಾಜಂತ್ರಿ, ಅಂಬಿ, ಹಾಗೂ ಪರಿಶಿಷ್ಟ ಜಾತಿಯರಿಗೆ ನೀಡಿದ ಜವಾಬ್ದಾರಿಯನ್ನು ಪುರಾತನ ಕಾಲದಿಂದಲೂ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆಯಾ ಆಚರಣೆ ಸಂದರ್ಭದಲ್ಲಿ ಆಯಾ ಜವಾಬ್ದಾರಿಯ ಕಾರ್ಯವನ್ನು ಪುರಾತನ ಕಾಲದಿಂದಲೂ ಸಾಂಗವಾಗಿ ನೆರವೇರಿಸುತ್ತಿದ್ದಾರೆ.
ದೇವಿಯ ಬಳಿ ಹೇಳಿಕೊಂಡ ಸಮಸ್ಯೆಗಳು ನಿವಾರಣೆಯಾದ ಮೇಲೆ ದೇವಿಗೆ ಹರಕೆ ಸಲ್ಲಿಸುವ ವಾಡಿಕೆ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ದೇವಿಯ ದರ್ಶನ ಪಡೆಯಲು ಕರ್ನಾಟಕ, ಗೋವಾ, ಮಹಾರಾಷ್ಟç ಸೇರಿದಂತೆ ಇನ್ನಿತರ ಪ್ರದೇಶದಿಂದ ಭಕ್ತರು ಆಗಮಿಸಿತ್ತಾರೆ. ಗ್ರಾಮದಲ್ಲಿ ಯಾವುದೇ ಪ್ರಮಾಣ ಮಾಡುವುದಿದ್ದರೂ ಸಾತೇರಿ ದೇವಿಯ ಮುಂದೆ ಮಾಡಲಾಗುತ್ತದೆ. ಸೆ 11ರಿಂದ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.