ಶಿರಸಿ: ಚೌತಿ ಹಿನ್ನಲೆ ಗಣಪನ ವಿಗ್ರಹ ನೋಡಲು ಪೇಟೆಗೆ ಬಂದಿದ್ದ ಇಬ್ಬರು ಚಿನ್ನದ ಸರ ಕಳೆದುಕೊಂಡಿದ್ದು, ಶಿರಸಿಯ ಜನ ಅದನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಬಕ್ಕಳ ಗ್ರಾಮದ ಲತಾ ಭಟ್ ಎಂಬಾತರು ಸೋಮವಾರ ರಾತ್ರಿ ತಮ್ಮ ಬಂಗಾರದ ತಾಳಿಯನ್ನು ಕಳೆದುಕೊಂಡಿದ್ದರು. ಶಿವಾಜಿ ಚೌಕ್ ಬಳಿಯಿರುವ ಗಣಪತಿ ನೋಡಲು ಬಂದಿದ್ದ ಅವರು ಬಸ್ ನಿಲ್ದಾಣಕ್ಕೆ ಹೋಗುವಾಗ ಸರ ಕಣ್ಮರೆಯಾಗಿತ್ತು. ಶಿರಸಿಯ ಪವನ್ ರಾಮದಾಸ ಎಸ್ ಅವರಿಗೆ ಆ ತಾಳಿ ಸಿಕ್ಕಿದ್ದು, ಅದನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದರು. ಶಿರಸಿಯ ರಾಜ್ ನ್ಯೂಸ್ ಕರಾವಳಿ ವಾಹಿನಿ ಈ ಬಗ್ಗೆ ವರದಿ ಪ್ರಸಾರ ಮಾಡಿದ್ದರು. ಬೆಂಗಳೂರಿಗೆ ತೆರಳಿದ್ದ ಲತಾ ಅವರು ಆ ವರದಿ ಗಮನಿಸಿ, `ಚಿನ್ನದ ಸರ ತಮ್ಮದು’ ಎಂದು ಖಚಿತಪಡಿಸಿದ್ದರು. 15 ಗ್ರಾಂ ತೂಕದ 1.30 ಲಕ್ಷ ರೂ ಬೆಲೆಯ ಚಿನ್ನದ ಸರವನ್ನು ಲತಾ ಅವರ ಸಹೋದರ ಠಾಣೆಗೆ ಬಂದು ಸ್ವೀಕರಿಸಿದರು.
ಮೊನ್ನೆ ಬಾಳೆಸರದ ಸ್ವಾತಿ ನಾಯ್ಕ ಅವರು ಸಹ ಚಿನ್ನದ ಸರ ಕಳೆದುಕೊಂಡಿದ್ದು, ಅದನ್ನು ಗಜಾನನೋತ್ಸವ ಸಮಿತಿ ಸ್ವಾತಿ ಅವರಿಗೆ ಹಿಂತಿರುಗಿಸಿದ್ದರು. ಶಿರಸಿಯ ವಿವಿಧ ಕಡೆ ಸ್ಥಾಪಿಸಲಾದ ಗಣಪತಿ ವಿಗ್ರಹಗಳನ್ನು ನೋಡಲು ಸ್ವಾತಿ ಅವರು ತೆರಳಿದ್ದರು. ಆಗ, ಅವರ ಕತ್ತಿನಲ್ಲಿದ್ದ ಸರ ಕಾಣೆಯಾಗಿತ್ತು. ಮನೆಗೆ ಬಂದ ನಂತರ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಜ್ಯೂ ಸರ್ಕಲ್ ಸಾರ್ವಜನಿಕ ಗಜಾನನೋತ್ಸವ ಸಮಿತಿ ಸದಸ್ಯ ಪ್ರಕಾಶ್ ಬಂಡಾರಿ ತಮಗೆ ಸಿಕ್ಕಿ ಚಿನ್ನದ ಸರವನ್ನು ವಾರಸುದಾರರಿಗೆ ಮುಟ್ಟಿಸಿದ್ದರು.