ಕುಮಟಾ: ಬೆಂಗಳೂರಿನಿoದ ಆಗಮಿಸಿದ ವಿದ್ಯಾರ್ಥಿಗಳು ಗೋಕರ್ಣ ಕಡಲತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಾಯದ ಅಂಚಿನಲ್ಲಿದ್ದ ಐವರನ್ನು ರಕ್ಷಣಾ ಸಿಬ್ಬಂದಿ ಕಾಪಾಡಿದ್ದಾರೆ.
ಬುಧವಾರ ಬೆಳಗ್ಗೆ ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳು ಗೋಕರ್ಣಕ್ಕೆ ಆಗಮಿಸಿದ್ದರು. ಅಪಾಯದ ಸೂಚನೆ ನೀಡಿದರೂ ಅದನ್ನು ಮೀರಿ ಸಮುದ್ರದ ಅಲೆಗಳಿಗೆ ಅಡ್ಡಲಾಗಿ ಅವರು ನೀರಿಗೆ ಇಳಿದಿದ್ದರು. ಅಲೆಗಳ ಸುಳಿಗೆ ಸಿಲುಕಿ ಒಬ್ಬ ನಾಪತ್ತೆಯಾಗಿದ್ದು, ಐವರು ನೀರು ಕುಡಿದು ಅಸ್ವಸ್ಥಗೊಂಡಿದ್ದರು.
ಅಸ್ವಸ್ಥಗೊoಡವರನ್ನು ನೋಡಿದ ಸರ್ವೇಶ ಮೊರ್ಜೆ, ಪಂಢರಿನಾಥ ಮೂರ್ಜೆ ತಕ್ಷಣ ಸಮುದ್ರಕ್ಕೆ ಹಾರಿ ರಕ್ಷಿಸಿದರು. ಕರಾವಳಿ ಕಾವಲು ಪಡೆಯವರು ಆಗಮಿಸಿ ಉಳಿದವರನ್ನು ದಡಕ್ಕೆ ತಂದರು. ಸಮುದ್ರ ಪಾಲಾಗುತ್ತಿದ್ದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರ ಜೀವ ಉಳಿದಿದ್ದು, ಕಣ್ಮರೆಯಾದ ಕೋಲಾರ ಶ್ರೀನಿವಾಸಪುರದ ವಿನಯ ಎಸ್ ವಿ (22) ಈವರೆಗೂ ಸಿಕ್ಕಿಲ್ಲ. ಆತನಿಗಾಗಿ ಶೋಧ ಮುಂದುವರೆದಿದೆ.
ಅಸ್ವಸ್ಥಗೊoಡವರು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕುಮಟಾಗೆ ತೆರಳಿದ್ದಾರೆ.