ಸಹಕಾರಿ ಕ್ಷೇತ್ರದಲ್ಲಿ ಮಾದರಿ ಆಗಬೇಕಿದ್ದ TSS ಸಂಸ್ಥೆಯಲ್ಲಿ ಕೆಲ ವರ್ಷಗಳಿಂದ ಒಂದಿಲ್ಲೊ0ದು ಅಹಿತಕರ ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಅದು ಇನ್ನಷ್ಟು ಪ್ರಚಾರ ಪಡೆದಿದ್ದು, ನಿತ್ಯ ಒಂದಲ್ಲ ಒಂದು ವಿವಾದ ಸಂಸ್ಥೆಯನ್ನು ಸುತ್ತಿಕೊಂಡಿದೆ. ಹಳೆಯ ಆಡಳಿತ ಮಂಡಳಿ ಹಾಗೂ ಹೊಸ ಆಡಳಿತ ಮಂಡಳಿ ನಡುವೆ ಸಾಕಷ್ಟು ಕೆಸರಾಟ ನಡೆದಿದೆ. ಈ ಕೆಸರಾಟವೇ ಎಲ್ಲಾ ವಿವಾದಗಳ ಕೇಂದ್ರಬಿoದು ಎಂಬುದು ರಹಸ್ಯವಾಗಿ ಉಳಿದಿಲ್ಲ. ಆದರೆ, ಯಾರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ!
ಹೊಸ ಹಾಗೂ ಹಳೆ ಆಡಳಿತ ಮಂಡಳಿಯವರ ಕಚ್ಚಾಟ-ಕೆಸರಾಟ ಎರಡೂ ಕಾನೂನು ಕಟಕಟೆಯಲ್ಲಿದೆ. ಅಲ್ಲಿಯೂ ಅವರಿವರ ಹಗ್ಗ ಜಗ್ಗಾಟ ಮುಂದುವರೆದಿದೆ. ಈ ನಡುವೆ ಅಡಿಕೆ ಕದ್ದ ಪ್ರಕರಣ, ಜಮೀನು ವಿಷಯದಲ್ಲಿ ಯುವತಿಯರ ರಂಪಾಟ, ಅವಧಿ ಮೀರಿದ ಉತ್ಪನ್ನ ಮಾರಾಟ, ಕಾನೂನು ಮೀರಿ ವ್ಯವಹಾರಗಳ ನಡುವೆ ಇದೀಗ ತೂಕ ಮತ್ತು ಅಳತೆ ವಿಷಯದಲ್ಲಿನ ಲೋಪ TSS’ನ್ನು ಆವರಿಸಿಕೊಂಡಿದೆ.
ಪ್ರಸ್ತುತ TSS ಬ್ರಾಂಡ್‌ನ ಕೃಷಿಮಿತ್ರ ಕಾಳು ಗೊಬ್ಬರದಲ್ಲಿನ ಎನ್‌ಪಿಕೆ ಪ್ರಮಾಣ ಕಡಿಮೆ ಇರುವ ಬಗ್ಗೆ ರೈತರು ಆರೋಪಿಸಿದ್ದಾರೆ. ಸಿದ್ದಾಪುರ ತಾಲೂಕಿನ ರೈತ ಮಹಾಬಲೇಶ್ವರ ಹೆಗಡೆ ಅಡಿಕೆ ಮರಗಳಿಗಾಗಿ `ಕೃಷಿ ಮಿತ್ರ’ ಗೊಬ್ಬರ ಖರೀದಿಸಿದ್ದು, ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬೆಂಗಳೂರಿನ ಮಾಧವ ಅಸೋಸಿಯೆಟ್ ಗೊಬ್ಬರ ಪರೀಕ್ಷಿಸಿ `ಚೀಲದ ಮೇಲೆ ನಮೂದಾದ ಪ್ರಮಾಣದಲ್ಲಿ NPK ಅಂಶ ಈ ಗೊಬ್ಬರದಲ್ಲಿ ಇಲ್ಲ’ ಎಂದು ತಿಳಿಸಿದೆ. ಚೀಲದ ಮೇಲೆ 14:6:21 ಎಂದು ಬರೆಯಲಾಗಿದ್ದು, ಪ್ರಯೋಗಾಲಯದ ವರದಿ 4.41:0.073:14.35 ಪ್ರಮಾಣದಲ್ಲಿ ಎನ್‌ಪಿಕೆ ಅಂಶ ಇರುವುದಾಗಿ ತಿಳಿಸಿದೆ.
`ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಿಲ್ಲ’ ಎಂಬುದು ರೈತರ ಆರೋಪ. `ಅಧಿಕ ಪ್ರಮಾಣದಲ್ಲಿ ಲಾಭಗಳಿಸುವ ಉದ್ದೇಶದಿಂದ ಸಂಸ್ಥೆ ರೈತರ ತೋಟ ಹಾಳು ಮಾಡುತ್ತಿದೆ’ ಎಂದವರು ದೂರಿದ್ದಾರೆ.