ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ ಅರಣ್ಯವಾಸಿ ಕುಟುಂಬವಿದ್ದು, 1852 ಕುಟುಂಬದವರಿಗೆ ಮಾತ್ರ ಮಾನ್ಯತೆ ದೊರೆತಿದೆ. ಅರಣ್ಯ ಹಕ್ಕು ನೀಡುವ ಜೊತೆ ಎಲ್ಲರಿಗೂ ಸಮಾನ ನ್ಯಾಯ ಕೊಡಬೇಕು ಎಂಬ ನಿಟ್ಟಿನಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ 32 ವರ್ಷಗಳಿಂದ ಹೋರಾಟ ನಡೆಸುತ್ತಿದೆ.
ಪ್ರಸ್ತುತ 33ನೇ ವರ್ಷಕ್ಕೆ ಈ ಹೋರಾಟ ಪಾದಾರ್ಪಣೆ ಮಾಡಿದ ಹಿನ್ನಲೆ ಶಿರಸಿಯ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಸೆ 12ರಂದು ಬೆಳಗ್ಗೆ ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಚಿಂತನಾ ಸಭೆ ನಡೆಯಲಿದೆ. ಸಾಮಾಜಿಕ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಜಿಲ್ಲಾ ಮಟ್ಟದ ಚಿಂತನ ಕಾರ್ಯಕ್ರಮದಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದರೊಂದಿಗೆ ಸುಪ್ರೀಂ ಕೋರ್ಟನಲ್ಲಿ ಅನಧಿಕೃತ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ಪ್ರಕರಣದ ಬಗ್ಗೆಯೂ ಚರ್ಚೆ ನಡೆಯಲಿದೆ. ಎಲ್ಲಾ ಅರಣ್ಯ ಅತಿಕ್ರಮಣದಾರರು, ಹೋರಾಟಗಾರರು ಸಭೆಗೆ ಆಗಮಿಸುವಂತೆ ನ್ಯಾಯವಾದಿ ರವೀಂದ್ರ ನಾಯ್ಕ ಕೋರಿದ್ದಾರೆ.
ಪರ್ಸ ಸಿಕ್ಕವರು ಮರಳಿಸಿ
ಕಾರವಾರ: ಕಡವಾಡ – ಕೋಡಿಭಾಗ ರಸ್ತೆಯಲ್ಲಿ ಕರವೇ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಅವರ ಮಿನಿ ಪ್ಯಾಕೇಟ್ ಕಾಣೆಯಾಗಿದ್ದು, ಸಿಕ್ಕವರು ಮರಳಿಸಿ ಎಂದವರು ಮನವಿ ಮಾಡಿದ್ದಾರೆ.
ಕಡವಾಡ ಮುಖ್ಯ ರಸ್ತೆಯಿಂದ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿ ಕಾಣೆಯಾಗಿರುವ ಶಂಕೆಯಿದೆ. ಕೆನರಾ ಬ್ಯಾಂಕ್ ಎಟಿಎಂ, ವಿವಿಧ ದಾಖಲೆ ಹಾಗೂ ಔಷಧಿಯನ್ನು ಹೊಂದಿದ ಪ್ಯಾಕೇಟ್ ಇದಾಗಿದೆ. ಸಿಕ್ಕವರು 9916884674ಗೆ ಕರೆ ಮಾಡಿ ಮರಳಿಸುವಂತೆ ಅವರು ಕೋರಿದ್ದಾರೆ.
ಅಗ್ನಿವೀರನಿಗೆ ದೊರೆತ ಬೆಳ್ಳಿ ಪದಕ
ಕುಮಟಾ: ಅಗ್ನಿ ಶಾಮಕ ದಳದ ರಾಜೇಶ ಕೇಶವ ಮಡಿವಾಳ ಅವರು ಡೆನ್ಮಾರ್ಕ್ನಲ್ಲಿ ನಡೆದ 15ನೇ ವಿಶ್ವ ಫೈಯರ್ ಫೈಟರ್ಸ್ ಗೇಮ್ಸ್ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನಾರಾಯಣ ಯಾಜಿ: ವರದಾ ಬಳಗ ಸಂತಸ
ಹೊನ್ನಾವರ: ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಯಾಜಿ ಅವರನ್ನು ವರದಾ ಬಳಗದವರು ಸನ್ಮಾನಿಸಿದರು.
ವರದಾ ಬಳಗದ ಹಿರಿಯ ಸದಸ್ಯ ಮಲ್ಲಿನಾಥ ಮಾಪಾರಿ ನಾರಾಯಣ ಯಾಜಿ ಅವರ ಸೇವೆಯನ್ನು ಕೊಂಡಾಡಿದರು. `ಈ ಸನ್ಮಾನದಿಂದ ತನ್ನ ಜವಾಬ್ದಾರಿ ಹೆಚ್ಚಿದೆ’ ಎಂದು ಈ ವೇಳೆ ನಾರಾಯಣ ಯಾಜಿ ಹೇಳಿದರು.
`ನಾರಾಯಣ ಯಾಜಿ ಅವರ ಕಾರ್ಯಕ್ಷಮತೆ, ಅಧ್ಯಯನಶೀಲತೆ ಹಾಗೂ ಸಮಾಜಿಕ ಕಳಕಳಿಯಿಂದ ಅವರಿಗೆ ದೊಡ್ಡ ಹುದ್ದೆ ಸಿಕ್ಕಿದೆ. ಸಂಸ್ಕೃತ ಕಾಲೇಜು ಹಾಗೂ ಪಂಡಿತರು ಇರುವ ಉತ್ತರ ಕನ್ನಡ ಜಿಲ್ಲೆಗೆ ಅವರ ಕೊಡುಗೆಗಳಿರಲಿ’ ಎಂದು ಪತ್ರಕರ್ತ ರಾಧಾಕೃಷ್ಣ ಭಟ್ಟ ಹಾರೈಸಿದರು.
ನಾರಾಯಣ ಯಾಜಿ ಅವರನ್ನು ಅಭಿನಂದಿಸಿ ಕೃಷ್ಣ ಭಟ್ಟ, ರಘುಪತಿ ಹೆಗಡೆ, ಪಿ.ಎನ್.ಹೆಗಡೆ, ಗಣಪತಿ ಭಾಗವತ್, ವೆಂಕಟಯ್ಯ ದೇವಾಡಿಗ, ತ್ರಿವೇಣಿ ಹೆಗಡೆ ಮುಂತಾದವರು ಮಾತನಾಡಿದರು. ಶ್ರೀಕಾಂತ ಹೆಗಡೆ ಸನ್ಮಾನ ಪತ್ರವನ್ನು ವಾಚಿಸಿದರು. ನೇತ್ರಾವತಿ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಪೂರ್ಣಾನಂದ ವಾರಂಬಳ್ಳಿ, ವೆಂಕಟಯ್ಯ ದೇವಾಡಿಗ, ನಾರಾಯಣ ಗಾಣಿಗ, ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಪಿ.ಎನ್. ಹೆಗಡೆ, ನಾಗರಾಜ ಯಾಜಿ ಇದ್ದರು.
ತ್ರಿವೇಣಿ ಹೆಗಡೆ ಹಾಗೂ ವಿದ್ಯಾ ಭಟ್ಟ ಪ್ರಾರ್ಥಿಸಿದರು. ವರದಾ ಬಳಗದ ತಿಮ್ಮಣ್ಣ ಭಾಗವತ ಸ್ವಾಗತಿಸಿದರು. ಶ್ರೀಕಾಂತ ಹೊಳ್ಳ ನಿರೂಪಿಸಿದರು. ವಿಶ್ವೇಶ್ವರ ಯಾಜಿ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ಸಿಗೆ ನೂತನ ಅಧ್ಯಕ್ಷ
ಜೋಯಿಡಾ: ಜೋಯಿಡಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಮಾರುತಿ ಶಂಕರ ಗಾವಡೆ ಅವರನ್ನು ನೇಮಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಗಾಂಜಾ ಮಾರಾಟಗಾರರ ಸೆರೆ
ದಾಂಡೇಲಿ: ಅಂಬೇವಾಡಿ ರೈಲ್ವೆ ಸ್ಟೇಷನ್ ಹತ್ತಿರದ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಗಾoಧಿನಗರದ ನಿವಾಸಿ ಮಹೇಶ ಕೋಟಿ ಹಾಗೂ ಟೌನಶಿಪಿನ ಅಮನ್ ತಹಶೀಲ್ದಾರ್ ಬಂಧಿತರು. ಅವರ ಬಳಿ ಇದ್ದ 50 ಸಾವಿರ ರೂ. ಮೌಲ್ಯದ 1 ಕೆಜಿ 216 ಗ್ರಾಂ ತೂಕದ ಗಾಂಜಾ ಜೊತೆ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಭಾಗಾಧಿಕಾರಿಗೆ ಬಂಜಾರ ಸಮುದಾಯದವರ ಸನ್ಮಾನ
ಮುಂಡಗೋಡ: ಬಂಜಾರ ಸಮಾಜದಲ್ಲಿ ಮಹಿಳಾ ಐಎಎಸ್ ಉಪವಿಭಾಗ ಅಧಿಕಾರಿಯಾಗಿ ಆಯ್ಕೆಯಾದ ಕರ್ನಾಟಕದ ಮೊದಲ ಮಹಿಳೆ ಕಾವ್ಯಾರಾಣಿ ಕೆ ಅವರಿಗೆ ಮುಂಡಗೋಡ ತಾಲೂಕಾ ಬಂಜಾರ ಸಮಾಜದವರು ಸನ್ಮಾನಿಸಿದರು.
ಶಿರಸಿ ಉಪ ವಿಭಾಗ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಮಾಜದವರು ಶುಭ ಕೋರಿದರು. ಈ ವೇಳೆ ಸಮಾಜದ ಕೆಲ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಬಾವಿಗೆ ಹಾರಿ ಆತ್ಮಹತ್ಯೆ
ಕುಮಟಾ: ಹೆಗಡೆಯ ಜನಮಕ್ಕಿಯಲ್ಲಿ ದೀಪಕ ವೆಂಕಟರಮಣ ನಾಯ್ಕ (55) ಎಂಬಾತ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾವಿಯಲ್ಲಿ ಈತನ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶವವನ್ನು ಮನೇಲೆತ್ತಿ ಶವಾಗಾರಕ್ಕೆ ಸಾಗಿಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಕಾಲೇಜು ಮುಚ್ಚುವ ಹುನ್ನಾರಕ್ಕೆ ವಿರೋಧ
ಹೊನ್ನಾವರ: ಜಿಲ್ಲೆಯ ಏಕೈಕ ಬಿ.ಎಸ್.ಡಬ್ಲ್ಯೂ ಕಾಲೇಜನ್ನು ಮುಚ್ಚುವ ಹಾಗೂ ಸ್ಥಳಾಂತರಿಸುವ ಹುನ್ನಾರದ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಇದನ್ನು ವಿರೋಧಿಸಿ ವಿವಿಧ ಅಧೀಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಅರೇಅಂಗಡಿಯ ಸಿರಿ ಬಿ.ಎಸ್.ಡಬ್ಲೂ. ಕಾಲೇಜ್ ಕಳೆದ 13 ವರ್ಷಗಳಿಂದ ಸರಿಯಾಗಿ ನಡೆಯುತ್ತಿದೆ. ಮೊದಲ ಬ್ಯಾಚಿನಲ್ಲಿಯೇ ಧಾರವಾಡ ವಿಶ್ವವಿದ್ಯಾಲಯದಿಂದ ಸುವರ್ಣ ಪದಕಗಳಿಸಿದ ಈ ಕಾಲೇಜು ಇದಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ಮುಚ್ಚುವ ಹಾಗೂ ಸ್ಥಳಾಂತರಿಸುವ ಕೆಲಸ ನಡೆಯಬಾರದು ಎಂದು ಆಗ್ರಹಿಸಿದರು.
ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ನಾಯಕಿ
ಅಂಕೋಲಾ: ಸುಂಕಸಾಳ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಸುರೇಶ ನಾಯ್ಕ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅಲ್ಲಿಗೆ ತೆರಳಿ ಸುರೇಶ ನಾಯ್ಕ ಅವರ ಆರೋಗ್ಯ ವಿಚಾರಿಸಿದರು.
ಗ್ಯಾರೇಜಿನಲ್ಲಿ ಅಡಗಿದ್ದ ಮೊಸಳೆ
ದಾಂಡೇಲಿ: ಅಂಬಿಕಾನಗರದ ಕೆಪಿಸಿಯ ಗ್ಯಾರೇಜಿನಲ್ಲಿ 10 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿದೆ. ಕೆಪಿಸಿ ಅಧಿಕಾರಿಗಳು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಅರಣ್ಯ ಸಿಬ್ಬಂದಿ ಆಗಮಿಸಿ ಆ ಮೊಸಳೆಯನ್ನು ನದಿಗೆ ಬಿಟ್ಟರು.
ಹುತಾತ್ಮರ ಸೇವೆ ಸ್ಮರಿಸೋಣ
ಯಲ್ಲಾಪುರ: ಅರಣ್ಯ ಸಂರಕ್ಷಣಾ ಹೋರಾಟದಲ್ಲಿ ಹುತಾತ್ಮರಾದವರನ್ನು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಬುಧವಾರ ಸ್ಮರಿಸಿದರು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ ಪಿ ಮಾತನಾಡಿ `ಹುತಾತ್ಮರ ಸೇವೆ ಹಾಗೂ ತ್ಯಾಗ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು. `ಅರಣ್ಯ ಸಂರಕ್ಷಣಾ ಸಿಬ್ಬಂದಿ ಕಾಡಿನ ಬೆಂಕಿ, ಕಳ್ಳ ಬೇಟೆ ಹಾಗೂ ಮರ ಕಡಿಯುವವರನ್ನು ಬೆನ್ನಟ್ಟಿ ಹೋಗಿ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇಂಥ ಸಮಸ್ಯೆಗಳಲ್ಲಿ ಸಿಲುಕಿದವರು ಸಾವನಪ್ಪಿದ್ದು, ಅವರ ಶ್ರಮದ ಫಲವಾಗಿ ಪೃಕೃತಿ ಉಳಿದಿದೆ’ ಎಂದರು.
ಕ್ರೀಡಾಕೂಟದಲ್ಲಿ ಶಿವಾಜಿ ಶಾಲಾ ಮಕ್ಕಳ ಸಾಧನೆ
ಕಾರವಾರ: ಬಾಡದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿವಾಜಿ ಹೈಸ್ಕೂಲ್, ಶಿವಾಜಿ ಬಾಲಕರ ಪ್ರೌಢಶಾಲೆ ಹಾಗೂ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ವಿಜೇತರಾದ ಈ ಎಲ್ಲಾ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.
ಸ್ಮಾರಕ ಕುರಿತು ಪ್ರಬಂಧ ಸ್ಪರ್ಧೆ
ಅಂಕೋಲಾ: `ಐತಿಹಾಸಿಕ ಪರಂಪರೆ ಉಳಿಸಿ’ ಅಭಿಯಾನದ ಅಂಗವಾಗಿ ಕರ್ನಟಕ ಇತಿಹಾಸ ಅಕಾಡೆಮಿ ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ಅಪರಿಚಿತ ಸ್ಮಾರಕಗಳನ್ನು ಬೆಳಕಿಗೆ ತರುವ ಉದ್ದೇಶ ಈ ಸ್ಪರ್ಧೆಗಿದೆ ಎಂದು ಅಕಾಡೆಮಿ ಕಾರ್ಯಕಾರಿ ಮಂಡಳಿ ಸದಸ್ಯ ಶ್ಯಾಮಸುಂದರ ಗೌಡ ಹೇಳಿದ್ದಾರೆ. ಯಾರೂ ಬೇಕಾದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ಮೊದಲ ಬಹುಮಾನ 10 ಸಾವಿರ ರೂ, ದ್ವಿತಿಯ ಬಹುಮಾನ 7 ಸಾವಿರ ರೂ ಹಾಗೂ 3ನೇ ಬಹುಮಾನ 5 ಸಾವಿರ ರೂಪಾಯಿ ಸಿಗಲಿದೆ. ಉತ್ತಮ ಪ್ರಬಂಧ ಬರೆದವರಿಗೆ 2 ಸಾವಿರ ರೂ ಸಿಗಲಿದೆ. ಮಾಹಿತಿಗೆ ಇಲ್ಲಿ ಕರೆ ಮಾಡಿ: 7019024187