ಸಿದ್ದಾಪುರ: ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ.
ಸೆ 10ರಂದು ಅಂಚೆ ಕಚೇರಿ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ಅಲ್ಲಿನ ಎಲ್ಲಾ ದಾಖಲೆಗಳನ್ನು ತಡಕಾಡಿದ್ದಾರೆ. ಕಾಗದ ಪತ್ರಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಅದಾದ ನಂತರ ಅಂಚೆ ಕಚೇರಿಯ ಒಳಗಿದ್ದ ಮುದ್ರೆ ಹಾಗೂ ಮೊಳೆ ಪೆಟ್ಟಿಗೆಯನ್ನು ಹೊತ್ತೊಯ್ದಿದ್ದಾರೆ.
ಈ ಅಂಚೆ ಕಚೇರಿಯಲ್ಲಿ ಬೆಲೆ ಬಾಳುವ ಟೇಬಲ್ ಫ್ಯಾನ್, ಸೋಲಾರ್ ಬ್ಯಾಟರಿ ಮೊದಲಾದವುಗಳಿದ್ದರೂ ಕಳ್ಳರು ಅದನ್ನು ಮುಟ್ಟಿಲ್ಲ. ಕಳ್ಳರನ್ನು ಪತ್ತೆ ಮಾಡಿ ಅಂಚೆ ಕಚೇರಿಯ ಆಸ್ತಿಯನ್ನು ಮರಳಿ ಕೊಡಿಸುವಂತೆ ಶೇಲೂರು ಶಾಖಾ ಅಂಚೆ ಪಾಲಕ ಸುನಿಲ ಪ್ರಕಾಶ ಹೆಗಡೆ (28) ಪೊಲೀಸ್ ದೂರು ನೀಡಿದ್ದಾರೆ.



