ಕಾರವಾರ: ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ನಡೆದ ಹೊಡೆದಾಟದಲ್ಲಿ ಸಾವನಪ್ಪಿದ್ದ ಸಂದೇಶ ಪ್ರಭಾಕರ್ ಬೋರ್ಕರ್ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಅದೇ ಕುಟುಂಬದ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಬೋರ್ಕರ್ ಮನೆತನದವರಿಂದ ಪ್ರತಿ ವರ್ಷದಂತೆ ಈ ವರ್ಷ ಗಣಪತಿ ಕೂರಿಸಲಾಗಿತ್ತು. ಸೆ 7ರಂದು ಗಣಪತಿ ಪೂಜೆ ನಡೆದ ನಂತರ ಅಲ್ಲಿದ್ದ ಹಣಕ್ಕಾಗಿ ಎರಡು ಬಣಗಳ ನಡುವೆ ಹೊಡೆದಾಟ ನಡೆದಿತ್ತು. ದೇವರ ಕಾಸಿಗಾಗಿ ಸಹೋದದರೇ ಪರಸ್ಪರ ಹೊಡೆದಾಡಿಕೊಂಡಿದ್ದು ಈ ವೇಳೆ ಮನೀಷ್ ಬೋರ್ಕರ್ ಎಂಬಾತ ಸಂದೇಶ ಬೋರ್ಕರ್ ಎಂಬಾತರನ್ನು ಚಾಕುವಿನಿಂದ ಇರಿದಿದ್ದ. ರಕ್ತದ ಮಡುವಿನಲ್ಲಿ ಬಿದ್ದು ಸಂದೇಶ ಬೋರ್ಕರ್ ಸಾವನಪ್ಪಿದ್ದರು.
ಸಾವನಪ್ಪಿದ ಸಂದೇಶ ಬೋರ್ಕರ್ ಸರ್ಕಾರಿ ಉದ್ಯೋಗಿಯಾಗಿದ್ದರು. ಈಚೆಗಷ್ಟೇ ಅವರ ವಿವಾಹವಾಗಿತ್ತು. ಗಣೇಶನ ಅಲಂಕಾರಕ್ಕೆ ಕೂಡಿಟ್ಟ ಹಣ ಅವರ ಬದುಕಿಗೆ ಮಾರಕವಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಶಿರಸಿ ನಗರದ ಕಿರಣ ಬೋರಕರ್ ಹಾಗೂ ಪ್ರಭಾಕರ ಬೋರ್ಕರ್ ಎಂಬಾತರ ನಡುವೆ ಶುರುವಾದ ಗಲಾಟೆ ಇದಾಗಿದ್ದು, ಈ ಹೊಡೆದಾಟದಲ್ಲಿ ಪ್ರಭಾಕರ ಬೋರ್ಕರ್ ನೆಲಕ್ಕೆ ಬಿದ್ದಿದ್ದರು. ಹೀಗಾಗಿ ಅವರ ಮಗ ಸಂದೇಶ ಸಹ ರೊಚ್ಚಿಗೆದ್ದು ತಂದೆಯ ಪರ ವಾಗ್ವಾದ ನಡೆಸಿದ್ದರು. ಆಗ ಕಿರಣ ಬೋರ್ಕರ್ ಅವರ ಮಗ ಮನೀಷ ಬೋರ್ಕರ್ ಸಹ ಜಗಳಕ್ಕೆ ಬಂದಿದ್ದು, ದೊಡ್ಡವರ ನಡುವೆ ಇದ್ದ ಜಗಳ ಮಕ್ಕಳ ವ್ಯಾಪ್ತಿಗೆ ಬಂದಿತ್ತು. ಸoದೇಶ ಹಾಗೂ ಮನೀಷ್ ನಡುವಿನ ಈ ಜಗಳದಲ್ಲಿ ರೊಚ್ಚಿಗೆದ್ದ ಮನೀಷ್ ಸಂದೇಶರಿಗೆ ಚೂರಿ ಇರಿದಿದ್ದ. ಚೂರಿ ಇರಿದ ರಭಸಕ್ಕೆ ದೇಹದ ಒಳಗೆ ಚಾಕು ಮುರಿದಿತ್ತು. ಅಪಾರ ರಕ್ತಸ್ರಾವದಿಂದ ಸಂದೇಶ ಸಾವನಪ್ಪಿದ್ದರು. ಶರದ ಪ್ರಭಾಕರ ಬೋರ್ಕರ್ ಸಹ ಗಾಯಗೊಂಡಿದ್ದು, ಪೊಲೀಸ್ ದೂರು ನೀಡಿದ್ದರು.
ಇದನ್ನೂ ಓದಿ: ದೇವರ ದುಡ್ಡಿಗೆ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!
ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ಶಿರಸಿ ಬಾಪೂಜಿನಗರದಲ್ಲಿ ವಾಸವಾಗಿರುವ ಕಾರವಾರ ಮೂಲದ ಖಾಸಗಿ ಉದ್ಯೋಗಿಗಳಾದ ಮನಿಷ ಕಿರಣ ಬೋರ್ಕರ್ (30), ರತನ್ ಮನೋಹರ್ ಬೋರ್ಕರ್ (45) ಟೇಲರ್ ಆಗಿರುವ ಸಂತೋಷ ಮನೋಹರ ಬೋರ್ಕರ್ (44), ಚಾಲಕರಾಗಿರುವ ಪ್ರಶಾಂತ ಮನೋಹರ ಬೋರ್ಕರ್ (51) ಹಾಗೂ ನೌಕರಿ ಮಾಡುತ್ತಿದ್ದ ಕಿರಣ ಮನೋಹರ ಬೋರ್ಕರ್ (54) ಅವರನ್ನು ಬಂಧಿಸಿದ್ದಾರೆ.



