ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮರಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟಕ್ಕಿಳಿದವರು ಅರಣ್ಯ ರಕ್ಷಕ ಅಣ್ಣಪ್ಪ. ಅವರಿಂದ ಎರಡು ಮರಗಳನ್ನು ಬದುಕಿಸಲು ಸಾಧ್ಯವಾಗದೇ ಇದ್ದರೂ ಆ ಭಾಗದ ಸಾವಿರಾರು ಸಾಗವಾನಿ ಮರಗಳ ಜೀವ ಕಾಪಾಡಿದರು.
ಚಿಕ್ಕೋಡಿ ತಾಲೂಕಿನ ಕಬ್ಬೂರಿನವರಾಗಿದ್ದ ಅಣ್ಣಪ್ಪ ಮುಗಳಖೋಡ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅರಣ್ಯ ರಕ್ಷಕರಾಗಿದ್ದರು. ಜಣಗಾ ಅರಣ್ಯ ವ್ಯಾಪ್ತಿಯಲ್ಲಿ ಅವರು ಕರ್ತವ್ಯದಲ್ಲಿದ್ದರು. ಸಾಂಬ್ರಾಣಿಯನ್ನು ಕೇಂದ್ರವಾಗಿರಿಸಿಕೊoಡು ನಿತ್ಯ 20 ಕಿಮೀ ಸೈಕಲ್ ಮೇಲೆ ಸಂಚರಿಸಿ ವನ್ಯ ಸಂಪತ್ತು ರಕ್ಷಣೆಗಾಗಿ ಶ್ರಮಿಸುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಸೈಕಲ್ ಏರಿದರೆ ಕಾಡು-ಮೇಡುಗಳನ್ನೆಲ್ಲ ಸುತ್ತಾಡಿ ಮನೆ ಸೇರಲು ರಾತ್ರಿ ಆಗುತ್ತಿತ್ತು.
2002 ಜುಲೈ 26ರಂದು ಅವರು ಸೈಕಲ್ ಮೇಲೆ ಸಂಚರಿಸುತ್ತಿದ್ದಾಗ ಕಾಡಿನೊಳಗೆ ಶಬ್ದ ಕೇಳಿಸಿ ಅಲ್ಲಿ ತೆರಳಿದರು. ಅಲ್ಲಿ ಇಬ್ಬರು ಸಾಗವಾನಿ ಮರ ಕಡಿಯುತ್ತಿದ್ದರು. ಇದನ್ನು ವಿರೋಧಿಸಿದ ಅವರು ಆ ಇಬ್ಬರಿಗೂ ಕಾಡಿನ ಮಹತ್ವದ ಬಗ್ಗೆ ಪಾಠ ಮಾಡಿದ್ದರು. ಅದೇ ಕೊನೆ, ನಂತರ ಅವರನ್ನು ಜೀವಂತವಾಗಿ ನೋಡಿದವರಿಲ್ಲ!
ಮರಗಳ್ಳತನಕ್ಕೆ ಬಂದವರು ಅಣ್ಣಪ್ಪ ಅವರ ಎರಡು ಕೈಗಳನ್ನು ಹಗ್ಗದಿಂದ ಕಟ್ಟಿ ಮರಕ್ಕೆ ನೇಣು ಹಾಕಿದ್ದರು. ಅಣ್ಣಪ್ಪ ಅವರ ಸಾವಿನ ನಂತರವೂ ದುಷ್ಟರು ತಮ್ಮ ವಿಕೃತಿ ಮೆರೆದಿದ್ದರು. ವನ್ಯ ಸಂಪತ್ತು ರಕ್ಷಣೆಗಾಗಿ ಹೋರಾಡಿದ ಅಣ್ಣಪ್ಪ ಅವರು ತಮ್ಮ 49ನೇ ವಯಸ್ಸಿನಲ್ಲಿ ದುಷ್ಕಮಿಗಳ ಅಟ್ಟಹಾಸಕ್ಕೆ ಸಾವನಪ್ಪಿದರು. ದುಷ್ಕರ್ಮಿಗಳು ಕಡಿದಿದ್ದ ಸಾಗವಾನಿ ನಾಟುಗಳನ್ನು ಅಲ್ಲಿಯೇ ಬಿಟ್ಟು ಆ ಇಬ್ಬರು ಕಳ್ಳರು ಪರಾರಿಯಾಗಿದ್ದು, ಜೀವ ಹೋಗುವ ಕೊನೆ ಕ್ಷಣದಲ್ಲಿಯೂ ಅಣ್ಣಪ್ಪ ಅವರು ಅರಣ್ಯ ಸಂಪತ್ತನ್ನು ಇಲಾಖೆಗೆ ಒಪ್ಪಿಸಿದ್ದರು.
ಅಣ್ಣಪ್ಪ ಅವರ ಮಾವ ಅರ್ಜುನ ಪಾಟೀಲ್ ಅವರು ಸಹ ಅರಣ್ಯ ರಕ್ಷಕರಾಗಿದ್ದರು. ಅವರ ನೆರವಿನಿಂದ ತಟ್ಟಿಹಳ್ಳ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದು ಅಣ್ಣಪ್ಪ ಅವರು ಅರಣ್ಯದ ಮಹತ್ವ ಅರಿತಿದ್ದರು. 10 ವರ್ಷಗಳ ಕಾಲ ಫ್ಯೂನ್ ಆಗಿ ಕೆಲಸ ಮಾಡಿದರು. ನಂತರ ಅರಣ್ಯ ರಕ್ಷಕರಾಗಿ ಕಾಡು ಸುತ್ತಿದರು. ಗಿಡ-ಮರಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಅವರು ವನ್ಯ ಸಂಪತ್ತಿಗೆ ಕೊಂಚ ಸಮಸ್ಯೆಯಾದರೂ ಸಹಿಸುತ್ತಿರಲಿಲ್ಲ. ಅವರ ಸೇವೆ ಸ್ಮರಿಸಿದ ಕೆನರಾ ವೃತ್ತದ ಎಲ್ಲಾ ನೌಕರರು ತಮ್ಮ ಒಂದು ದಿನದ ವೇತನವನ್ನು ಅಣ್ಣಪ್ಪ ಅವರ ಕುಟುಂಬಕ್ಕೆ ನೀಡಿ ಸಹಾಯ ಮಾಡಿದ್ದರು.
ಅಣ್ಣಪ್ಪ ಅವರ ಜೀವನವನ್ನು ಆದರ್ಶವನ್ನಾಗಿರಿಸಿಕೊಂಡ ಅವರ ಪುತ್ರ ಸಂತೋಷ್ ಸಹ ಇದೀಗ ಅರಣ್ಯ ಇಲಾಖೆಯ ಕರ್ತವ್ಯದಲ್ಲಿದ್ದಾರೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕರಾಗಿ ಸೇವೆ ಶುರು ಮಾಡಿದ ಸಂತೋಷ್ ಇದೀಗ ಯಲ್ಲಾಪುರ ಕಚೇರಿಯ ಕರ್ತವ್ಯದಲ್ಲಿದ್ದಾರೆ. `ಅಣ್ಣಪ್ಪ ಅವರ ಕೊಲೆ ಪ್ರಕರಣ ವಿಚಾರಣೆ ನಡೆದು ಇಬ್ಬರು ಕಾಡುಗಳ್ಳರು ಐದು ವರ್ಷ ಜೈಲಿನಲ್ಲಿದ್ದರು. ಸಾಕ್ಷಿ ಕೊರತೆಯಿಂದ ಅವರು ಹೊರಬಂದರು’ ಎಂಬ ನೋವು ಅನೇಕರನ್ನು ಕಾಡುತ್ತಿದೆ.