ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಬರ್ಮಾ ಅಡಿಕೆ ಇದೀಗ ಸ್ಥಳೀಯ ಮಾರುಕಟ್ಟೆಗೂ ಪ್ರವೇಶಿಸಿದ್ದು, ಅಡಿಕೆ ಬೆಳೆಗಾರರ ಆತಂಕ ಹೆಚ್ಚಿಸಿದೆ. ಅಡಿಕೆ ಅಂಗಳಕ್ಕೆ ಬರ್ಮಾ ಅಡಿಕೆ ಪ್ರವೇಶಿಸಿದ ಕಾರಣ ಅಡಿಕೆ ದರ 3 ಸಾವಿರ ಕುಸಿತ ಕಂಡಿದೆ.
ಅಡಿಕೆ ವರ್ತಕ ಅಬ್ದುಲ್ ಮಜೀದ್ ಎಂಬಾತ ಸ್ಥಳೀಯ ಅಡಿಕೆ ಜೊತೆ ಬರ್ಮಾ ಅಡಿಕೆಯನ್ನು ಮಿಶ್ರಣಗೊಳಿಸಿ ಟಿಎಸ್‌ಎಸ್ ಅಂಗಳದಲ್ಲಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಈ ಅಡಿಕೆಯನ್ನು ಅಲ್ಲಿನ ಆಡಳಿತ ಮಂಡಳಿಯವರು ಜಪ್ತು ಮಾಡಿ, ತನಿಖೆ ನಡೆಸಿದ್ದಾರೆ. ಸ್ವಲ್ಪ ಯಾಮಾರಿದರೂ ಶಿರಸಿ ಟಿಎಸ್‌ಎಸ್ ಆವಾರದಲ್ಲಿ ಬರ್ಮಾದಿಂದ ಬಂದ ಕಳ್ಳ ಅಡಿಕೆ ವ್ಯಾಪಾರವಾಗುತ್ತಿತ್ತು. ಬುಧವಾರ ಅಲ್ಲಿನ ಆಡಳಿತ ಮಂಡಳಿಯವರ ಸತ್ಯ ಶೋಧನೆಯಿಂದ ಅಡಿಕೆ ವರ್ತಕರ ಜೊತೆ ಅಡಿಕೆ ಬೆಳೆಗಾರರು ಸಹ ಬದುಕುಳಿದಿದ್ದಾರೆ. ಅದಾಗಿಯೂ ಅಡಿಕೆ ಮಿಶ್ರಣದ ಕಳ್ಳಾಟದ ಸುದ್ದಿಯಿಂದ ಅಡಿಕೆ ಬೆಲೆ 3 ಸಾವಿರ ರೂ ಕುಸಿತ ಕಂಡಿದೆ.
ಪ್ರತಿ ಕೆಜಿಗೆ 100ರೂ ಆಸುಪಾಸಿನ ದರದಲ್ಲಿ ಈ ಅಡಿಕೆ ಭಾರತಕ್ಕೆ ಬರುತ್ತಿದೆ. ಸ್ಥಳೀಯ ಅಡಿಕೆ ಜೊತೆ ಅದನ್ನು ಮಿಶ್ರಣ ಮಾಡುವ ಮೂಲಕ ಐದು ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರುವ ಪ್ರಯತ್ನ ನಡೆಸಿದ್ದಾರೆ. ಈ ಕುತಂತ್ರದಿoದಾಗಿ ಮಲೆನಾಡಿನ ಉತ್ತಮ ಅಡಿಕೆಗೆ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಇದ್ದ ಬೇಡಿಕೆ ಕುಸಿದಿದ್ದು, ಚಾಲಿ ಅಡಿಕೆ ದರ ಕ್ವಿಂಟಲ್‌ಗೆ 33 ಸಾವಿರದಿಂದ 30 ಸಾವಿರಕ್ಕೆ ಇಳಿದಿದೆ.
ರೈತನ ವೇಷದಲ್ಲಿದ್ದ ವರ್ತಕನನ್ನು ಈ ಅಡಿಕೆ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಅಡಿಕೆ ಖರೀದಿಸಿದ ಬಗ್ಗೆ ವ್ಯಾಪಾರಿ ಬಳಿ ಯಾವುದೇ ಅಧಿಕೃತ ದಾಖಲೆ ಸಹ ಇರಲಿಲ್ಲ. ಈ ಹಿನ್ನಲೆ ಎಲ್ಲಾ ಅಡಿಕೆಯನ್ನು ಟಿಎಸ್‌ಎಸ್ ಮುಟ್ಟುಗೋಲು ಹಾಕಿಕೊಂಡಿದ್ದು, ಅಧಿಕೃತ ದಾಖಲೆ ನೀಡಿದ ನಂತರ ಬಿಡುವುದಾಗಿ ಆತನಿಗೆ ಸೂಚಿಸಿದೆ. ಕಳ್ಳ ಮಾರ್ಗದಲ್ಲಿ ವಿದೇಶಿ ಅಡಿಕೆಯನ್ನು ತಂದು ಮಾರಾಟ ಮಾಡುವುದರಿಂದ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.