ಯಲ್ಲಾಪುರ: ಶಿರೂರು ಗುಡ್ಡ ಕುಸಿತ ಪರಿಣಾಮ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಇಬ್ಬರು ಮಕ್ಕಳಿಗೆ ಉದ್ಯೋಗ ಕೊಡಿಸಲು ಕಾರಣರಾದ ವಿರೋಧ ಪಕ್ಷದ ನಾಯಕರ ನಡೆಗೆ ಬಿಜೆಪಿ ಮುಖಂಡ ರಾಮು ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿನಿoದ ಆಯ್ಕೆಯಾದ ಕಾರವಾರ ಶಾಸಕ ಸತೀಶ್ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಯತ್ನದಿಂದ ಜಗನ್ನಾಥ ನಾಯ್ಕ ಅವರ ಇಬ್ಬರು ಮಕ್ಕಳಿಗೆ ಉದ್ಯೋಗ ಸಿಕ್ಕಿದೆ. ಇದರಲ್ಲಿ ಕುಮಟಾದ ಜೆಡಿಎಸ್ ನಾಯಕ ಸೂರಜ ನಾಯ್ಕ ಸೋನಿ ಅವರ ಪಾತ್ರವೂ ಇದ್ದು, ಇವರೆಲ್ಲರೂ ಇತರೆ ರಾಜಕಾರಣಿಗಳಿಗಿಂತ ಭಿನ್ನವಾಗಿದ್ದಾರೆ ಎಂದು ರಾಮು ನಾಯ್ಕ ಹೇಳಿದ್ದಾರೆ.
`ದುರಂತ ನಡೆದಾಗ ಸ್ಥಳಕ್ಕೆ ಹೋಗಿ ಭರವಸೆ ನೀಡುವ ನಾಯಕರು ನಂತರ ಅದನ್ನು ಮರೆಯುತ್ತಾರೆ. ಆದರೆ, ಮಂಕಾಳು ವೈದ್ಯ, ಸತೀಶ್ ಸೈಲ್, ಎಚ್ ಡಿ ಕುಮಾರಸ್ವಾಮಿ ಹಾಗೂ ಸೂರಜ ನಾಯ್ಕ ಸೋನಿ ಜಗನ್ನಾಥ ನಾಯ್ಕ ಅವರ ಮಕ್ಕಳಾದ ಪಲ್ಲವಿ ಹಾಗೂ ಕೃತಿಕಾಗೆ ಹೊರ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಿಸಿ ಅವರ ಕುಟುಂಬಕ್ಕೆ ನೆರವಾಗಿದ್ದಾರೆ’ ಎಂದವರು ಸ್ಮರಿಸಿದರು. `ಈ ದುರಂತದಲ್ಲಿ ತೊಂದರೆ ಅನುಭವಿಸಿದ ಎಲ್ಲರ ಬಗ್ಗೆಯೂ ಸರ್ಕಾರ ಮುತುವರ್ಜಿವಹಿಸಬೇಕು’ ಎಂದವರು ಒತ್ತಾಯಿಸಿದ್ದಾರೆ.
ಪಲ್ಲವಿ ಅವರಿಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಹಾಗೂ ಕೃತಿಕಾ ಅವರಿಗೆ ಕೈಗಾ ಅಣು ಘಟಕದಲ್ಲಿ ಉದ್ಯೋಗ ದೊರೆತಿದೆ.