`ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳು ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ಸೇವಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಹೇಳಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಅಂಗನವಾಡಿಗಳಿಗೆ ಕಳೆದ ನಾಲ್ಕು ತಿಂಗಳಿನಿ0ದ ಪೌಷ್ಠಿಕ ಆಹಾರ ಸರಬರಾಜು ಆಗುತ್ತಿಲ್ಲ. ಹೀಗಾಗಿ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಕಾಡುವ ಆತಂಕ ಎದುರಾಗಿದೆ.
ಮೊದಲು ಪ್ರತಿ ಮಗುವಿನ ಊಟಕ್ಕೆ 80 ಗ್ರಾಂ ಅಕ್ಕಿ, ಕುಡಿಯಲು ಹಾಲು, ಪೌಷ್ಠಿಕತೆ ಹೆಚ್ಚಿಸಲು ಹಸಿರುಕಾಳು, ವಾರಕ್ಕೆ ಎರಡು ಬಾರಿ ಕಡಲೆ, ಮಧ್ಯಾಹ್ನದ ಊಟಕ್ಕೆ ಅಗತ್ಯವಿರುವ ಬೇಳೆಕಾಳು ಜೊತೆ ಸಂಜೆ ಮನೆಗೆ ಮರಳುವ ಮುನ್ನ ನೀಡಲು ಚಿಕ್ಕಿಯನ್ನು ಕೊಡಲಾಗುತ್ತಿತ್ತು. ವಾರದಲ್ಲಿ ಒಂದು ದಿನ ಪಾಯಸದ ಊಟ ಕಡ್ಡಾಯವಾಗಿತ್ತು. 2024ರ ಮೇ ತಿಂಗಳ ನಂತರ ಇದೆಲ್ಲವೂ ಸ್ಥಗಿತವಾಗಿದೆ. ಪ್ರಸ್ತುತ ಅಂಗನವಾಡಿ ಮಕ್ಕಳಿಗೆ ತಲಾ 90 ಗ್ರಾಂ ಲೆಕ್ಕಾಚಾರದಲ್ಲಿ ರವಾ ಹಾಗೂ ಖಾರವಾದ ಮಸಾಲೆ ಬಿಟ್ಟು ಬೇರೆನೂ ಸಿಗುತ್ತಿಲ್ಲ. ಈ ಎರಡು ಸಾಮಗ್ರಿ ಬಳಸಿ ಮಧ್ಯಾಹ್ನದ ಊಟಕ್ಕೆ ಉಪ್ಪಿಟ್ಟು ತಯಾರಿಸುತ್ತಿದ್ದು, ಬೇಡ ಬೇಡ ಎಂದರೂ ಅದನ್ನು ಮಕ್ಕಳಿಗೆ ತಿನಿಸುವ ಒತ್ತಡ ಶಿಕ್ಷಕರ ಮೇಲಿದೆ. ಇದೀಗ ಮಕ್ಕಳಿಗೆ ನೀಡುತ್ತಿರುವ ಉಪ್ಪಿಟ್ಟಿನಲ್ಲಿ ಶೇಂಗಾಬೀಜ ಸಹ ಸಹ ಕಾಣುತ್ತಿಲ್ಲ!
ಬೆಳಗ್ಗೆ 9 ಗಂಟೆಗೆ ಅಂಗನವಾಡಿ ಶುರುವಾಗುತ್ತದೆ. ಸಂಜೆ 4 ಗಂಟೆಗೆ ಮಕ್ಕಳು ಮನೆಗೆ ಮರಳುತ್ತಾರೆ. ಮಧ್ಯಾಹ್ನ ಉಪ್ಪಿಟ್ಟು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಣ್ಣ ಮಕ್ಕಳಿಂದ ಆಗುತ್ತಿಲ್ಲ. ನಡುವೆ ಕೊಡುವ ಒಂದು ಲೋಟ ಹಾಲು ಹಾಗೂ ಚಿಕ್ಕದಾದ ಉಂಡೆ ಸಹ ಪ್ರಯೋಜನಕ್ಕಿಲ್ಲ. `92ಸೆಂಟಿ ಮೀಟರ್ ಉದ್ದವಿರುವ 3 ವರ್ಷದ ಮಗು ಅಂದಾಜು 13 ಕೆಜಿ ತೂಕ ಹೊಂದಿರಬೇಕು. 99.1ಸೆಂ.ಮೀ ಉದ್ದವಿರುವ 4 ವರ್ಷದ ಮಗು ಅಂದಾಜು 14 ಕೆಜಿ ತೂಕವಿರಬೇಕು’ ಎಂಬ ಸರ್ಕಾರಿ ಲೆಕ್ಕಾಚಾರವಿದ್ದು, ಈ ಎತ್ತರ ಹಾಗೂ ತೂಕ ಇಲ್ಲದ ಮಕ್ಕಳನ್ನು `ಅಪೌಷ್ಠಿಕ ಮಗು’ ಎಂದು ಗುರುತಿಸಲಾಗುತ್ತದೆ. ಪ್ರಸ್ತುತ ಪೌಷ್ಠಿಕ ಆಹಾರಗಳೇ ಪೂರೈಕೆ ಆಗದ ಕಾರಣ ಬಹುತೇಕ ಮಕ್ಕಳು ಅಪೌಷ್ಠಿಕತೆಯ ಸಾಲಿಗೆ ಸೇರುವ ಸಾಧ್ಯತೆ ಹೆಚ್ಚಿದೆ. ಮನೆಗೆ ಹೋದ ಮಕ್ಕಳು ಹಸಿವಿನ ಬಗ್ಗೆ ಪಾಲಕರಲ್ಲಿ ಹೇಳುತ್ತಿದ್ದು, ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ.
`ಮೊದಲು ಪ್ರಾದೇಶಿಕ ಪದ್ಧತಿಗೆ ಅನುಗುಣವಾಗಿ ಮಕ್ಕಳಿಗೆ ಅಗತ್ಯವಿರುವ ಆಹಾರ ಪೂರೈಕೆಗೆ ಅವಕಾಶವಿತ್ತು. ಆದರೆ, ಇದೀಗ ರಾಜ್ಯದಿಂದಲೇ ಎಲ್ಲಾ ಕಡೆ ರವಾ ಸರಬರಾಜು ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಕ್ಕಳು ಉಪ್ಪಿಟ್ಟು ತಿನ್ನಲು ಇಷ್ಟಪಡದ ಕಾರಣ ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದು, ಸರ್ಕಾರಕ್ಕೂ ಮನವರಿಕೆ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.