ಪೌರೋಹಿತ್ಯ ಬದುಕಿನ ಬಿಡುವಿಲ್ಲದ ವೇಳೆಯಲ್ಲಿಯೂ ಬಿಡುವು ಮಾಡಿಕೊಂಡ ಗಣಪತಿ ಭಟ್ಟರು ಕಳೆದ ಐದು ದಶಕಗಳಿಂದ ತಾಳಮದ್ದಲೆ ಅರ್ಥದಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯಲ್ಲಾಪುರ ತಾಲೂಕಿನ ಮಾಗೋಡಿನವರಾದ ಗಣಪತಿ ಭಟ್ಟರು ಓದಿದ್ದು 7ನೇ ತರಗತಿ. ಆದರೂ ಸಂಸ್ಕೃತ, ಜ್ಯೋತಿಷ್ಯ ಹಾಗೂ ವೇದಭ್ಯಾಸ ಅಧ್ಯಯನ ಅಪಾರ. ಸ್ವರ್ಣವಲ್ಲಿ ಮಠ ಅವರ ಮೊದಲ ಪಾಠಶಾಲೆ. ಅಲ್ಲಿಂದ ಊರಿಗೆ ಮರಳಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಆ ಕಾಲದಲ್ಲಿ ವೈದಿಕರು ಅರ್ಥಧಾರಿಗಳಾಗಿದ್ದರೆ ಅಂಥವರಿಗೆ ಹೆಚ್ಚಿನ ಮನ್ನಣೆ. ಹೀಗಾಗಿ ಅವರು ಹೋದ ಕಡೆಗಳೆಲ್ಲ ಅಲ್ಲಿದ್ದವರು ತಾಳಮದ್ದಲೆ ಅರ್ಥ ಹೇಳುವಂತೆ ಒತ್ತಾಯಿಸುತ್ತಿದ್ದರು. ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ಒಂದಷ್ಟು ಪದ್ಯದೊಂದಿಗೆ ಅದರ ವಿವರಣೆ ನೀಡಿ ಬರುವುದು ಭಟ್ಟರ ಹವ್ಯಾಸವಾಗಿತ್ತು.
ತಮ್ಮ 20 ನೇ ವಯಸ್ಸಿನಲ್ಲಿ ಗಣಪತಿ ಭಟ್ಟರು ಅರ್ಥಗಾರಿಕೆಯನ್ನು ಆರಂಭಿಸಿದರು. ವ್ರತಗಳ ಉದ್ಯಾಪನೆ, ವೈಕುಂಠ ಸಮಾರಾಧನೆ, ತಿಥಿಗಳಿಗೆ ತೆರಳಿದಾಗ ಸಹ ಅವರ ಮಾತಿಗೆ ಜನ ತಲೆದೂಗುತ್ತಿದ್ದರು. ತಾರೀಮಕ್ಕಿ ರಾಮಚಂದ್ರ ಭಟ್ರು, ಬೆಳಖಂಡ ದೇವ ಭಟ್ರು ಮೊದಲಾದ ಹಿರಿಯರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಅವರು ಪಳಗಿದ್ದರು. ಈ ವೇಳೆ ಗಣಪತಿ ಭಟ್ಟರ ಜೊತೆಯಲ್ಲಿ ಮಾಗೋಡ ರಾಮಕೃಷ್ಣ ಭಟ್ಟ, ಮೊಟ್ಟೆಗದ್ದೆ ನಾರಾಯಣ ಭಟ್ಟ, ಬಾಲೀಗದ್ದೆಯ ತಿಮ್ಮಣ್ಣ ಭಟ್ಟ ಮೊದಲಾದ ವೈದಿಕರು ಅರ್ಥ ಹೇಳಲು ಶುರು ಮಾಡಿ, ವೈದಿಕ ಅರ್ಥದಾರಿಗಳ ತಂಡವೇ ಮಾಗೋಡು ಊರಿನಲ್ಲಿ ಸಿದ್ಧವಾಗಿತ್ತು!
ಕೃಷ್ಣ, ವಿದುರ, ಕರ್ಣ, ಧರ್ಮರಾಯ, ದೇವೇಂದ್ರ, ಅಂಬೆ, ಸಾವಿತ್ರಿ ಸೇರಿದಂತೆ ಎಲ್ಲ ಬಗೆಯ ಪಾತ್ರಗಳನ್ನೂ ಗಣಪತಿ ಭಟ್ಟರು ನಿರ್ವಹಿಸಿದ್ದಾರೆ. ಭಕ್ತಿ, ದುಃಖ, ಭಾವನಾತ್ಮಕ ಪಾತ್ರಗಳಿಂದ ಹೆಸರು ಪಡೆದಿದ್ದಾರೆ. ಮಾಗೋಡ, ಚಂದಗುಳಿ, ಅಣಲಗಾರ, ನಂದೊಳ್ಳಿ, ಕವಡಿಕೆರೆ, ಮಲವಳ್ಳಿ, ಹೆಗ್ಗಾರ ಮುಂತಾದ ಭಾಗಗಳಲ್ಲಿ ಹೆಚ್ಚಿನ ತಾಳಮದ್ದಲೆಗಳನ್ನು ನಡೆಸಿದ್ದಾರೆ. ತ್ರಿವೇದಿ, ನಿಸ್ರಾಣಿ, ಪ್ರಭಾಕರ ಜೋಶಿ, ಅನಂತ ವೈದ್ಯ ಮುಂತಾದ ಪ್ರಸಿದ್ಧ ಕಲಾವಿದರ ಜೊತೆ ಸೇರಿ ಅರ್ಥ ಹೇಳಿದ್ದಾರೆ. ಗಣಪತಿ ಭಟ್ಟರ ಸೇವೆ ಗಮನಿಸಿ ಅನೇಕ ಸನ್ಮಾನಗಳು ದೊರೆತಿವೆ. ಅಖಿಲ ಹವ್ಯಕ ಮಹಾಸಭಾದಿಂದ `ಹವ್ಯಕ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
* ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ