ಯಲ್ಲಾಪುರ: 15 ವರ್ಷಗಳ ಹಿಂದೆ 10 ಹೈನುಗಾರರಿಂದ ಶುರುವಾದ ಸವಣಗೆರಿಯ ಹಾಲು ಉತ್ಪಾದಕ ಸಂಘ ಕಳೆದ ವರ್ಷ ಎಲ್ಲಾ ಖರ್ಚುಗಳನ್ನು ಕಳೆದು 1.60 ಲಕ್ಷ ರೂ ಆದಾಯ ಪಡೆದಿದೆ. ಹಾಲು ಮಾರಾಟ ವಿಷಯದಲ್ಲಿ ಗುಣಮಟ್ಟ ಕಾಯ್ದುಕೊಂಡಿರುವುದೇ ಇದಕ್ಕೆ ಕಾರಣ.
`ಸಂಘ ಶುರುವಾದಾಗ 10 ರೈತರು ಇಲ್ಲಿ ಹಾಲು ಕೊಡುತ್ತಿದ್ದರು. ಇದೀಗ 40ಕ್ಕೂ ಅಧಿಕ ಜನ ಜಾನುವಾರುಗಳನ್ನು ಸಾಕಿ ಸಂಘಕ್ಕೆ ಹಾಲು ನೀಡುತ್ತಿದ್ದಾರೆ. ನಿತ್ಯ 100 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ತಾಜಾ ಹಾಲು ಪಡೆಯುವುದಕ್ಕಾಗಿ ಪಟ್ಟಣದ ಜನ ಸಹ ಡೈರಿಗೆ ಆಗಮಿಸುತ್ತಾರೆ’ ಎಂದು ಸಂಘದ ನಿರ್ದೇಶಕ ನಾರಾಯಣ ಭಟ್ಟ ಜೂಜನಬೈಲ್ ವಿವರಿಸಿದರು.
`ಸಂಘದ ಮೂಲಕ ಹೈನುಗಾರಿಕೆ ನಡೆಸುವವರಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಿರುವ ಪೌಷ್ಠಿಕಾಂಶವನ್ನು ಸಂಘ ಪೂರೈಸುತ್ತದೆ. ಹಾಲು ಕೊಡುವವರ ಅನುಕೂಲಕ್ಕಾಗಿ ಸವಣಗೇರಿಯ ಜೊತೆ ಹುತ್ಕಂಡದ ಬಳಿಯಲ್ಲಿ ಸಹ ಹಾಲು ಸಂಗ್ರಹಣಾ ಕೇಂದ್ರ ತೆರೆಯಲಾಗಿದೆ. ಸ್ಥಳೀಯ ಮಾರಾಟದ ನಂತರ ಉಳಿದ ಹಾಲನ್ನು ಧಾರವಾಡದ ನಂದಿನಿ ಘಟಕಕ್ಕೆ ನೀಡಲಾಗುತ್ತದೆ’ ಎಂದು ಮತ್ತೊಬ್ಬ ನಿರ್ದೇಶಕ ದುರ್ಗಪ್ಪ ಕಾಂಬ್ಳೆ ವಿವರಿಸಿದರು.
ಶನಿವಾರ ಸವಣಗೆರಿಯಲ್ಲಿ ಹಾಲು ಉತ್ಪಾದಕ ಸಂಘದ ವಾರ್ಷಿಕ ಸಭೆ ನಡೆದಿದ್ದು ಈ ವೇಳೆ ಸಂಘದ ಅಧ್ಯಕ್ಷ ಶ್ರೀಪಾದ ಹೆಗಡೆ ಸಂಘ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯ ಸುಬ್ಬಣ್ಣ ಉದ್ದಾಬೈಲ್ ಹಾಗೂ ಕೃಷ್ಣ ಹೆಗಡೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಉತ್ತಮ ಹೈನುಗಾರರಾದ ಅನಂತ ಹೆಗಡೆ ಅವರನ್ನು ಸಮಿತಿಯವರು ಸನ್ಮಾನಿಸಿದರು. ಸಂಘದ ನಿರ್ದೇಶಕರಾದ ಲಕ್ಷ್ಮೀ ಮರಾಠಿ, ನಾಗಭೂಷಣ ಭಟ್ಟ, ನಾರಾಯಣ ಹೆಗಡೆ, ಜಾಹ್ನವಿ ಭಟ್ಟ ಇತರರು ಇದ್ದರು.