ಶಿರಸಿ ಹೊಸ ಬಸ್ ನಿಲ್ದಾಣದಲ್ಲಿನ ಕ್ಯಾಂಟಿನ್ ಅವ್ಯವಸ್ಥೆ ಪ್ರಶ್ನಿಸಿದ ಶ್ರೀನಾಥ ಜೋಶಿ ಎಂಬಾತರ ಮೇಲೆ ಅಲ್ಲಿನ ನೌಕರರು ದಬ್ಬಾಳಿಕೆ ನಡೆಸಿದ್ದಾರೆ.
ಶ್ರೀನಾಥ ಜೋಶಿ ಮೂಲತ: ಕಾರವಾರದವರು. ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸೆ 12ರಂದು ರಾತ್ರಿ 10 ಗಂಟೆಗೆ ಅವರು ಕುಟುಂಬದವರ ಜೊತೆ ರಾಜಹಂಸ ಬಸ್ಸಿನಲ್ಲಿ ಶಿರಸಿಗೆ ಬಂದಿದ್ದು, ನಿರ್ವಾಹಕರ ಕೂಗು ಕೇಳಿ ಊಟಕ್ಕಾಗಿ ಬಸ್ ನಿಲ್ದಾಣದ ಕ್ಯಾಂಟಿನ್’ಗೆ ತೆರಳಿದ್ದರು. ಈ ಅವಧಿಯಲ್ಲಿ 5ಕ್ಕೂ ಅಧಿಕ ಬಸ್ಸುಗಳಲ್ಲಿನ ಪ್ರಯಾಣಿಕರನ್ನು ನಿಗಮದವರು ಅಲ್ಲಿ ಊಟಕ್ಕೆ ಬಿಟ್ಟಿದ್ದರು.
ಬಸ್ ಚಾಲಕ ನಿರ್ವಾಹಕರಿಗೆ ಪ್ರತ್ಯೇಕ ವ್ಯವಸ್ಥೆ ನೀಡಿದ್ದು, ಪ್ರಯಾಣಿಕರಿಗೆ ಟೋಕನ್ ನೀಡಿ ಊಟ ಕೊಡುತ್ತಿದ್ದರು. ಆದರೆ, ಶುದ್ಧ ಕುಡಿಯುವ ನೀರು ಇರಲಿಲ್ಲ. ಕಾಸು ಕೊಟ್ಟವರಿಗೆ ಬಿಲ್ ನೀಡುತ್ತಿರಲಿಲ್ಲ. ಊಟ-ತಿಂಡಿ ಸಹ ಗುಣಮಟ್ಟ ಕಾಯ್ದುಕೊಂಡಿರಲಿಲ್ಲ. ಎಲ್ಲಾ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನವಿರಲಿಲ್ಲ. ಕ್ಯಾಂಟಿನ್ ಒಳಭಾಗದಲ್ಲಿ ಸಾಕಷ್ಟು ಅವ್ಯವಸ್ಥೆಯಿದ್ದರೂ ಎಲ್ಲರೂ ಅನಿವಾರ್ಯವಾಗಿ ಅಲ್ಲಿಯೇ ಊಟ ಮಾಡುತ್ತಿದ್ದರು. ಉತ್ತಮ ಸೇವೆ ನೀಡಿ ಎಂದು ಕೇಳಿದವರಿಗೆ `ಇದು ನಿಮ್ಮ ಮನೆಯಲ್ಲ. ಸುಮ್ಮನೆ ತಿಂದು ಹೋಗಿ’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ದಬಾಯಿಸಿದ್ದರು. ಇದರೊಂದಿಗೆ ಇನ್ನಿತರ ಸಿಬ್ಬಂದಿ ಸಹ ಗ್ರಾಹಕರ ಜೊತೆ ಅನುಚಿತವಾಗಿ ವರ್ತಿಸಿದನ್ನು ಗಮನಿಸಿದ ಶ್ರೀನಾಥ ಜೋಶಿ ಆ ಬಗ್ಗೆ ಕ್ಯಾಂಟಿನ್ ಅವ್ಯವಸ್ಥೆಗಳ ಬಗ್ಗೆ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದರು.
ಹಣ ಪಾವತಿಸಿದ ನಂತರ ಬಿಲ್ ಕೇಳಿದವರಿಗೆ ನೀಡಲು ಕ್ಯಾಂಟಿನವರು ಸಿದ್ಧವಿರಲಿಲ್ಲ. ಬಿಲ್ ಕೇಳಿದ ಪರಿಣಾಮ ಅಲ್ಲಿನ ಕೆಲವರು ಶ್ರೀನಾಥ ಜೋಶಿ ಅವರ ಮೈಮೇಲೆ ಮುಗಿ ಬಿದ್ದಿದ್ದು, ಇದೇ ರೀತಿ ಬೇರೆ ಗ್ರಾಹಕರ ಜೊತೆಯೂ ವರ್ತಿಸಿದ್ದರು. ಈ ಬಗ್ಗೆ ಬಸ್ ನಿರ್ವಾಹಕರನ್ನು ಪ್ರಶ್ನಿಸಿದಾಗ `ಇಲ್ಲಿ ಬಿಟ್ಟು ಬೇರೆ ಕಡೆ ಊಟಕ್ಕೆ ಬಸ್ ನಿಲ್ಲಿಸಲು ನಮಗೆ ಅವಕಾಶವಿಲ್ಲ’ ಎಂದಿದ್ದರು. ಇದೀಗ ಈ ಎಲ್ಲಾ ಪರಿಸ್ಥಿತಿಯನ್ನು ನೋಡಿದ ಶ್ರೀನಾಥ ಜೋಶಿ ಅವರು ಬಸ್ ನಿಲ್ದಾಣದ ಅವ್ಯವಸ್ಥೆಗಳ ಬಗ್ಗೆ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದಾರೆ. ಬಸ್ ನಿಲ್ದಾಣದಲ್ಲಿ ನೀಡುವ ಆಹಾರ ಗುಣಮಟ್ಟದ ಬಗ್ಗೆ ತಪಾಸಣೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ. ಇದರೊಂದಿಗೆ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.