ಕಾರವಾರ: ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ 841 ಜನ ಭಾಗವಹಿಸಿದ್ದರು.
ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿ ಅವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 3 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು.
ಪ್ರೌಢ ಶಾಲಾ ವಿಭಾಗದಲ್ಲಿ ಅತ್ಯುತ್ತಮ 3 ಪ್ರಬಂಧಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಮುಂಡಗೋಡ ತಾಲೂಕಿನ ಹುನಗುಂದದ ಸರ್ಕಾರಿ ಪ್ರೌಢ ಶಾಲೆಯ ಸಮರ್ಥ ನಾಗರಾಜ ಅರ್ಕಸಾಲಿ (ಪ್ರಥಮ), ಹೊನ್ನಾವರ ತಾಲೂಕಿನ ಅರೆಅಂಗಡಿಯ ಎಸ್.ಕೆ.ಪಿ ಪ್ರೌಢಶಾಲೆಯ ಸುವರ್ಣಾ ಎಸ್ ಭಾಗವತ್ (ದ್ವಿತೀಯ), ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯ ದಿಶಾ ರಾಜೇಶ ನಾಯ್ಕ (ತೃತೀಯ) ಸ್ಥಾನ ಪಡೆದಿದ್ದಾರೆ.
ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ 301 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಅತ್ಯುತ್ತಮ 3 ಪ್ರಬಂಧಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಶಿರಸಿ ತಾಲೂಕು, ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನ ಮಧುರಾ ರಮೇಶ ಮಡಿವಾಳ (ಪ್ರಥಮ), ಹೊನ್ನಾವರದ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಶ್ರೇಯಾ ಅಣ್ಣಪ್ಪ ಗೌಡ (ದ್ವಿತೀಯ), ಕುಮಟಾ ತಾಲೂಕಿನ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ರೇವತಿ ಮಾಸ್ತಿ ಮುಕ್ರಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಅತ್ಯುತ್ತಮ 3 ಪ್ರಬಂಧಗಳನ್ನು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಮತ್ತು ಲೀಡ್ ಕಾಲೇಜು ಪ್ರಾಚಾರ್ಯರು ವಿಜೇತರ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ತೇಜಾ ಎಂ ನಾಯ್ಕ (ಪ್ರಥಮ), ಡಾ ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿನಾಯಕ ರಮೇಶ ನಾಯ್ಕ (ದ್ವಿತಿಯ), ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೀರ್ತನಾ ಶೇಖರ ನಾಯ್ಕ (ತೃತೀಯ) ಸ್ಥಾನ ಪಡೆದಿದ್ದಾರೆ.
ಈ ಎಲ್ಲಾ ವಿಜೇತರಿಗೆ ಅಕ್ಟೊಬರ್ 2ರಂದು ಗಾಂಧೀ ಜಯಂತಿ ದಿನ ನಡೆಯುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್ ತಿಳಿಸಿದ್ದಾರೆ.
ಥ್ರೋಬಾಲ್: ಶಿರವಾಡ ಶಾಲೆ ಜಿಲ್ಲಾಮಟ್ಟಕ್ಕೆ

ಕಾರವಾರ: ಮಾಲಾದೇವಿ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕೆ.ಪಿ.ಎಸ್ ಶಿರವಾಡ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಥ್ರೋ ಬಾಲ್ ಆಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಂಜುಮಾ ಕಕ್ಕೇರಿಕರ್, ಅಪ್ಸಾನ ಮನ್ನಾಬಾಯಿ, ರೋಜಾ ಭೋವಿ ವಡ್ಡರ್, ದೀಪ ಮಣ್ಣ ವಡ್ಡರ್, ರೇಖಾ ಕಲ್ಗಟ್ಕರ್, ಸಮ್ರಿನ್ ಕಕ್ಕೇರಿಕರ್, ಹನುಮವ್ವ ಬಂಡಿ ವಡ್ಡರ್, ರಾಹಿಲಾ ಕ್ವಾಜಾ, ಖುರೇಷಾ ಬಿ, ಸುಹಾನ ಬಾನು ಮುನ್ನಾಬಾಯಿ, ಭೂಮಿ ಬಾಂಧೇಕರ್, ಕಮಲ ವಡ್ಡರ್ ಅವರನ್ನು ಒಳಗೊಂಡ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಅರಣ್ಯವಾಸಿಗಳಿಂದ ಬೆಂಗಳೂರು ಚಲೋ!

ಶಿರಸಿ ಮಾರಿಕಾಂಬಾ ದೇವಸ್ಥಾನದ ಸಂಭಾಗಣದಲ್ಲಿ ನಡೆದ ಅರಣ್ಯ ಭೂಮಿ ಹೋರಾಟದ 33 ರ್ಷ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಯ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನುಬಾಹಿರ ವಿಚಾರಣೆ, ಅರಣ್ಯವಾಸಿಗಳ ಮೇಲಿನ ದಬ್ಬಾಳಿಕೆಯನ್ನು ಈ ಸಭೆ ಖಂಡಿಸಿದೆ. ಜಿಲ್ಲೆಯಲ್ಲಿ ಅರಣ್ಯವಾಸಿಗಳ ವಾಸ್ತವ್ಯ, ಬದುಕು ಮತ್ತು ಜನ ಜೀವನದ ಅಧ್ಯಯನದ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಹ್ವಾನ ನೀಡಲು ಸಭೆ ನಿರ್ಧರಿಸಿದೆ.
ಜೀವನ ಪಾಠ ಮಾಡಿದ ನಿವೃತ್ತ ಪ್ರಾಚಾರ್ಯ
ಯಲ್ಲಾಪುರ: `ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲಿಯೇ ಜೀವನದ ಗುರಿ ಬಗ್ಗೆ ಅವಲೋಕಿಸಬೇಕು’ ಎಂದು ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬಿಎ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ನಿರಂತರ ಅಧ್ಯಯನ, ಚಿಂತನೆ ಹಾಗೂ ಶಿಸ್ತಿನ ಜೀವನದಿಂದ ಯಶಸ್ಸು ಸಾಧ್ಯ’ ಎಂದವರು ಹೇಳಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮುಂಡಗೋಡು ಸಪ್ರದ ಕಾಲೇಜಿನ ಪ್ರಸನ್ನ ಸಿಂಗ್ ಬಿ ಮಾಹಿತಿ ನೀಡಿದರು. ಕಾಲೇಜು ಪ್ರಾಚಾರ್ಯ ಡಾ ಆರ್ ಡಿ ಜನಾರ್ಧನ್ ಮಾತನಾಡಿದರು.
ವೇದಾ ಭಟ್ಟ ಪ್ರಾರ್ಥಿಸಿದರು. ಶರತ್ ಕುಮಾರ್ ಸ್ವಾಗತಿಸಿದರು. ಮೇಘಾ ದೇವಳಿ ವಂದಿಸಿದರು. ನಂದಿತಾ ಭಾಗ್ವತ ನಿರ್ವಹಿಸಿದರು.
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಕ್ಕಳ ಸಾಧನೆ

ಶಿರಸಿ: ಹರಿಯಾಣದ ಅಂಬಾಲಾದಲ್ಲಿ ಜರುಗಿದ ಪಿಎಂ ಜವಾಹರ್ ನವೋದಯ ವಿದ್ಯಾಲಯಗಳ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಬನವಾಸಿಯ ಪ್ರತಿಜ್ಞಾ ಎಂ. ಹಾಗೂ ಚಿನ್ಮಯ ಡಿ. ಇವರು ಡಬಲ್ಸ್ನಲ್ಲಿ ಉತ್ತರ ಪ್ರದೇಶವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಆ ಮೂಲಕ ಕರ್ನಾಟಕ ಪ್ರತಿನಿಧಿಸಿ ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ನಡೆಯುವ ಎಸ್‌ಜಿಎಫ್‌ಐ ಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ.
ಹಿನ್ನೀರಿಗೆ ಮುಳುಗಿದ ಸೇತುವೆ

ಜೋಯಿಡಾ: ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೋಡಾ, ಪಾಂಜೇಲಿ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿರುವ ನಾಗೋಡಾ ಸೇತುವೆ ಜಲಾವೃತಗೊಂಡಿದೆ. ಸೂಪಾ ಹಿನ್ನೀರು ಆವರಿಸಿದ ಪರಿಣಾಮ ಆ ಭಾಗದ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಸೇತುವೆಯ ಸಂಪರ್ಕ ರಸ್ತೆ ಎರಡೂ ಬದಿಯಲ್ಲೂ ಹಿನ್ನೀರಿನ ಸಾಮಾನ್ಯ ಮಟ್ಟಕ್ಕಿಂತಲೂ ತೀರಾ ಕೆಳಗಡೆ ಇರುವುದರಿಂದ ಈ ಸಂಪರ್ಕ ರಸ್ತೆ ನೀರಿನಲ್ಲಿ ಮುಳುಗಿದೆ. ನಾಗೋಡಾ, ಪಾಂಜೇಲಿ, ದುಪೇವಾಡಿ, ಪತ್ರೆ ಮೊದಲಾದ ಗ್ರಾಮಗಳಿಗೆ ಈ ಸೇತುವೆ ಆಸರೆಯಾಗಿದ್ದು, ನಾಲ್ಕು ದಿನದಿಂದ ಆ ಭಾಗದ ಸಂಪರ್ಕ ಕಡಿತಗೊಂಡಿದೆ.
ನಿವೃತ್ತ ನೌಕರರೆಲ್ಲ ಇಲ್ಲಿ ಬನ್ನಿ..!
ಕಾರವಾರ: 7ನೇ ವೇತನ ಆಯೋಗದಲ್ಲಿನ ನ್ಯೂನ್ಯತೆ ಸರಿಪಡಿಸಿ ನಿವೃತ್ತ ನೌಕರರಿಗೆ ಆದ ಅನ್ಯಾಯ ಸರಿಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಸೆ 20ರಂದು ನಿವೃತ್ತ ನೌಕರರು ಸಭೆ ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಿದ್ದು, ನಿವೃತ್ತರಾದ ಎಲ್ಲಾ ನೌಕರರು ಆ ದಿನ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಲು ಕೋರಲಾಗಿದೆ. 11 ಗಂಟೆಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿ ಎಂ ಹೆಗಡೆ ಹೇಳಿದ್ದಾರೆ.
ಪ್ರವಾಸಕ್ಕೆ ಬಂದವ ಶವವಾದ!
ಕುಮಟಾ: ಗೋಕರ್ಣ ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗಿದ್ದ ಬೆಂಗಳೂರು ಕಾಲೇಜಿನ ವಿದ್ಯಾರ್ಥಿ ಶವ ಶುಕ್ರವಾರ ಕಡಲ ತೀರದಲ್ಲಿ ಸಿಕ್ಕಿದೆ.
ಕೋಲಾರ ಶ್ರೀನಿವಾಸಪುರದ ವಿನಯ ಎಸ್.ವಿ (22) ಹಾಗೂ ಆತನ 47 ಸಹಚರರು ಬುಧವಾರ ಗೋಕರ್ಣಕ್ಕೆ ಬಂದಿದ್ದರು. ಕಡಲತೀರದಲ್ಲಿ ಮೋಜು-ಮಸ್ತಿ ಮಾಡುತ್ತಿರುವಾಗ ಐವರು ಕೊಚ್ಚಿ ಹೋಗಿದ್ದು, ವಿನಯನನ್ನು ಹೊರತುಪಡಿಸಿ ಉಳಿದವರನ್ನು ಕರಾವಳಿ ಕಾವಲು ಪಡೆಯವರು ರಕ್ಷಿಸಿದ್ದರು. ಎಷ್ಟು ಹುಡುಕಿದರೂ ವಿನಯ ಪತ್ತೆ ಆಗಿರಲಿಲ್ಲ.
ಇದೀಗ ಎರಡು ದಿನಗಳ ಬಳಿಕ ವಿನಯನ ಶವ ದೊರೆತಿದೆ. ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಆ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.



