`ಕಸವನ್ನು ಸಂಪನ್ಮೂಲವನ್ನಾಗಿ ಪರಿವತಿಸುವ ಬಗ್ಗೆ ಸ್ವ ಸಹಾಯ ಸಂಘದ ಸದಸ್ಯರಿಗೆ ಜಿಲ್ಲಾಡಳಿತ ಅರಿವು ಮೂಡಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು `ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಆರೋಗ್ಯ ಇಲಾಖೆ ನೆರವು ಪಡೆದು ಆರೋಗ್ಯ ಶಿಬಿರ ನಡೆಸಬೇಕು. ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು’ ಎಂದರು. `ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಸೆಪ್ಟಂಬರ್ 17ರಿಂದ ಆಯೋಜಿಸುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಂದೊಲನ ನಡೆಸಬೇಕು’ ಎಂದು ಕರೆ ನೀಡಿದರು.
`ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಪ್ರಮುಖ ಧ್ಯೇಯವಾದ ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರ ಸ್ವಚ್ಛತೆ ಮನೋಭಾವವು ಪಾಕ್ಷಿಕದ ಅವಧಿಗೆ ಮಾತ್ರ ಸೀಮಿತವಾಗದೇ ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರೂ ಪ್ರತಿ ದಿನವೂ ನಿರಂತರವಾಗಿ ಆಚರಿಸಬೇಕು. ಇದನ್ನು ದೈನಂದಿನ ಜೀವನದ ಚಟುವಟಿಕೆಯನ್ನಾಗಿ ಮಾಡಿಕೊಳ್ಳಬೇಕು’ ಎಂದು ಹೇಳಿದರು. `ಪ್ರಕೃತಿಯ ಮೇಲೆ ನಡೆಯುತ್ತಿರುವ ಹಾನಿಯನ್ನು ಮತ್ತು ಮಾಲಿನ್ಯದ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಮಾಲಿನ್ಯರಹಿತ ಪರಿಸರವನ್ನು ಕೊಡುಗೆಯನ್ನಾಗಿ ನಿಡುವ ಮಹತ್ತರವಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದರು.